
ಕೋವಿಡ್-19 ಲಸಿಕೆ ವಿರುದ್ಧ ಸಾಕಷ್ಟು ಅಪಪ್ರಚಾರಗಳು ಹಾಗೂ ಅನುಮಾನಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಲಾಗುತ್ತಿದೆ. ಜಗತ್ತಿನಾದ್ಯಂತ ವಿವಿಧ ದೇಶಗಳ ಆರೋಗ್ಯ ಇಲಾಖೆಗಳು ಜನರಲ್ಲಿ ಈ ಲಸಿಕೆಗಳ ಬಗ್ಗೆ ಅದೆಷ್ಟೇ ಗ್ಯಾರಂಟಿ ಕೊಟ್ಟರೂ ಸಹ ಜನ ಇನ್ನೂ ಅನುಮಾನದಿಂದಲೇ ನೋಡುತ್ತಿದ್ದಾರೆ.
ಕೋವಿಡ್-19 ಲಸಿಕೆ ಹಾಕಿಸಿಕೊಂಡವರು ಸಲಿಂಗಿಗಳಾಗಿ ಬದಲಾಗುತ್ತಾರೆ ಎಂದು ಇಸ್ರೇಲ್‌ನ ಜೀವಿಶ್ ಧಾರ್ಮಿಕ ಗುರು ರಬ್ಬಿ ವಾರ್ನಿಂಗ್ ಕೊಟ್ಟಿದ್ದಾರೆ. ಜಾಗತಿಕ ರಾಜಕಾರಣದಲ್ಲಿ ಹೊಸ ಬದಲಾವಣೆ ತರಲೆಂದು ದುರುದ್ದೇಶಪೂರಿತ ಮನಸ್ಥಿತಿಗಳ ಸರ್ಕಾರಗಳು ಈ ಕೆಲಸಗಳನ್ನು ಮಾಡುತ್ತಿವೆ ಎಂದಿದ್ದಾರೆ ರಬ್ಬಿ.
“ಪೂರ್ಣ ಅಭಿವೃದ್ಧಿಯಾಗದ ವಸ್ತುವಿನಿಂದ ಅಭಿವೃದ್ಧಿಪಡಿಸಲಾದ ಯಾವುದೇ ಲಸಿಕೆಯಿಂದ ವಿರುದ್ಧ ಲಿಂಗಿಗಳ ಸ್ವಭಾವಗಳು ಮೈಗಂಟಿಕೊಳ್ಳುತ್ತವೆ” ಎಂದು ರಬ್ಬಿ ಡೇನಿಯಲ್ ಅಸೊರ್ ಹೇಳಿರುವುದು ಇಸ್ರೇಲೀ ಮಾಧ್ಯಮಗಳಲ್ಲಿ ವರದಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಲಸಿಕೆ ಅಭಿವೃದ್ಧಿಪಡಿಸಿದ ಫೈಜರ್ ಹಾಗೂ ಬಯೋಎನ್‌ಟೆಕ್ ಸಂಸ್ಥೆಗಳು ಕ್ರಿಮಿನಲ್ ಸಂಸ್ಥೆಗಳು ಎಂದು ಆಪಾದಿಸಿರುವ ರಬ್ಬಿ, ಈ ಲಸಿಕೆಯ ಪರಿಣಾಮದ ಬಗ್ಗೆ ಸುಳ್ಳು ಮಾಹಿತಿ ಕೊಟ್ಟಿವೆ ಎಂದು ಆಪಾದಿಸಿದ್ದಾರೆ.