ಸಾಮಾನ್ಯವಾದ ರೋಗಗಳು ಹಾಗೂ ಗಂಭೀರವಾದ ಕಾಯಿಲೆಗಳಿಂದ ಕಾಪಾಡಿಕೊಳ್ಳಲು ಆರೋಗ್ಯಯುತ ಪಥ್ಯ ಕಾಪಾಡಿಕೊಳ್ಳಲು ಬಹಳಷ್ಟು ವೈದ್ಯರು ಹೇಳುತ್ತಲೇ ಇರುತ್ತಾರೆ. ಒಳ್ಳೆಯ ಪಥ್ಯದಿಂದ ಬೊಜ್ಜಿನ ಸಮಸ್ಯೆ, ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗಗಳನ್ನು ದೂರ ಇಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಬೇಗ ದೇಹದ ತೂಕ ಇಳಿಸಿಕೊಳ್ಳಲೆಂದು ಅನೇಕ ಮಂದಿ ಉಪವಾಸ ಇರುತ್ತಾರೆ. ಉಪವಾಸ ಇರುವ ಕುರಿತಂತೆ ಇತ್ತೀಚೆಗೆ ನಡೆಸಿದ ಅಧ್ಯಯನವೊಂದರಲ್ಲಿ; ಬರೀ ತೂಕ ಇಳಿಸಿಕೊಳ್ಳುವುದಲ್ಲದೇ ಇತರ ಲೈಫ್‌ಸ್ಟೈಲ್ ಸಮಸ್ಯೆಗಳನ್ನು ಬರದಂತೆ ತಡೆಯಲು ಉಪವಾಸ ಇರುವುದು ಹೇಗೆ ನೆರವಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಹೆಲ್ಮಾಲ್ಟ್‌ಝ್ ಸಂಘದ ಮಾಲಿಕ್ಯುಲಾರ್ ಮೆಡಿಸಿನ್‌ನ ಮ್ಯಾಕ್ಸ್ ಡೆಲ್‌ಬ್ರಕ್ ಕೇಂದ್ರದ ಸಂಶೋಧಕರಾದ ಡಾ. ಸೋಫಿಯಾ ಫಾರ್ಸ್ಲಂಡ್ ಹಾಗೂ ಪ್ರೊಫೆಸರ್ ಡೊಮಿನಿಕ್ ಎನ್. ಮುಲ್ಲರ್ ನೇತೃತ್ವದ ತಂಡವೊಂದು ಈ ಬಗ್ಗೆ ಅಧ್ಯಯನ ನಡೆಸಿದೆ. ಪಥ್ಯದಲ್ಲಿ ಆಗುವ ಬದಲಾವಣೆಗಳಿಂದ ದೇಹದಲ್ಲಿನ ಮೆಟಬಾಲಿಸಂನಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂದು ಅಧ್ಯಯನ ನಡೆಸಿದ್ದು ನೇಚರ್ ಕಮ್ಯೂನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ಆಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ
ಹೈಪರ್‌ಟೆನ್ಸಿವ್ ಮೆಟಬಾಲಿಸಂ ಸಮಸ್ಯೆಯಿರುವ ರೋಗಿಗಳ ಸಮೂಹವೊಂದರ ಮೇಲೆ ಈ ಅಧ್ಯಯನ ನಡೆಸಲಾಗಿದ್ದು, ಇವರಿಗೆ 5 ದಿನಗಳ ಮಟ್ಟಿಗೆ, ಅತ್ಯಲ್ಪ ಆಹಾರ ಕೊಟ್ಟು ಉಪವಾಸ ಇರಿಸಿ ಪರೀಕ್ಷೆ ಮಾಡಲಾಗಿದೆ. ಈ ಹೊಸ ಪಥ್ಯದಿಂದ ರೋಗಿಗಳ ಸಿಸ್ಟಾಲಿಕ್ ರಕ್ತದೊತ್ತಡದಲ್ಲಿ ಸುಧಾರಣೆ ಕಂಡುಬಂದಿದ್ದು, ಹೈಪರ್‌ಟೆನ್ಷನ್‌ಗೆ ಮದ್ದು ತೆಗೆದುಕೊಳ್ಳಬೇಕಾದ ಅಗತ್ಯ ಸಾಕಷ್ಟು ಕಡಿಮೆಯಾಗಿತ್ತು.
“ಆರೋಗ್ಯಯುತ ಪಥ್ಯಕ್ಕೆ ವಾಲುವುದರಿಂದ ರಕ್ತದೊತ್ತಡದಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತದೆ. ಈ ಪಥ್ಯವನ್ನು ಉಪವಾಸದೊಂದಿಗೆ ಮಾಡಿದರೆ, ಇದರ ಪರಿಣಾಮ ಇನ್ನಷ್ಟು ಪರಿಣಾಮಕಾರಿಯಾಗಿರುತ್ತದೆ” ಎಂದು ಅಧ್ಯಯನ ಮೊದಲ ಆಥರ್ ಆಂಡ್ರಾಸ್ ಮೇಯ್‌ಫೀಲ್ಡ್ ತಿಳಿಸಿದ್ದಾರೆ.