ಜಗತ್ತಿನಾದ್ಯಂತ ಅನೇಕ ರೀತಿಯ ಸಮುದಾಯಗಳಿದ್ದು ಒಂದೊಂದರದ್ದೂ ಒಂದೊಂಥರಾ ಸಂಪ್ರದಾಯ. ಇವುಗಳಲ್ಲಿ ಕೆಲವೊಂದು ಬಹಳ ವಿಚಿತ್ರವಾಗಿಯೂ ಇವೆ.
ಇಂಡೋನೇಷ್ಯಾದ ಟೋರ್ಝಾ ಬುಡಕಟ್ಟು ಜನಾಂಗದ ಮಂದಿ ಬಹಳ ವರ್ಷಗಳಿಂದ ಒಂದು ವಿಚಿತ್ರ ಸಂಪ್ರದಾಯವೊಂದನ್ನು ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ಪ್ರೀತಿ ಪಾತ್ರರು ನಿಧನರಾಗಿ, ಅವರ ದೇಹವನ್ನು ಹೂಳಿದ ಬಳಿಕ ಪ್ರತಿ ವರ್ಷವೂ ಆ ದೇಹಗಳನ್ನು ಹೊರತೆಗೆದು ಅವುಗಳನ್ನು ಸ್ವಚ್ಛಗೊಳಿಸಿ, ಮೇಕ್ ಓವರ್ ಮಾಡುತ್ತಾರೆ ಈ ಮಂದಿ.
ಈ ಅಸ್ಥಿಗಳಿಗೆ ಹೊಸ ಬಟ್ಟೆ ತೊಡಿಸಿ, ಸಿಗರೇಟ್ಅನ್ನು ಬಾಯಿಗೆ ಇಟ್ಟು ಅವುಗಳೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ ಅಗಲಿದ ಕುಟುಂಬದ ಸದಸ್ಯರೊಂದಿಗೆ ಕಳೆದಿದ್ದ ಸುಮಧುರ ಕ್ಷಣಗಳನ್ನು ಈ ಮಂದಿ ಸ್ಮರಿಸುತ್ತಾರೆ.
ಟೋರ್ಝಾ ಬುಡಕಟ್ಟಿಗೆ ಸೇರಿದ ಸುಮಾರು ಹತ್ತು ಲಕ್ಷ ಮಂದಿ ಇಂಡೋನೇಷ್ಯಾದಲ್ಲಿ ಇದ್ದಾರೆ. ಅಗಲಿದ ಮಂದಿಯ ಆತ್ಮಗಳು ತಮ್ಮೊಡನೆಯೇ ತಂತಮ್ಮ ಮನೆಗಳಲ್ಲಿ ನೆಲೆಸುತ್ತವೆ ಎಂದು ಈ ಜನರು ನಂಬಿದ್ದಾರೆ.
ಮೃತ ದೇಹಗಳನ್ನು ವಾರಗಳ ಮಟ್ಟಿಗೆ ತಮ್ಮ ಮನೆಗಳಲ್ಲೇ ಇಟ್ಟುಕೊಳ್ಳುವ ಈ ಜನರು, ಅವಕ್ಕೆ ಅನ್ನಾಹಾರಗಳನ್ನು ನೀಡುವಂತೆ ನಟಿಸುತ್ತಾ, ಅವುಗಳೊಂದಿಗೆ ಮಾತುಕತೆ ಆಡುತ್ತಾ ಕಾಲ ಕಳೆಯುತ್ತಾರೆ. ಕೆಲ ದಿನಗಳ ಬಳಿಕ ಅದ್ಧೂರಿಯಾಗಿ ಈ ದೇಹಗಳಿಗೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.