ಬಾಲಿ: ಇಂಡೋನೇಷ್ಯಾದ ಬಾಲಿ ದ್ವೀಪದ ಮಂಗಗಳು ಹೆಚ್ಚಿನ ಆಹಾರ ಪಡೆಯಲು ದುಬಾರಿ ವಸ್ತುಗಳನ್ನು ಕಳವು ಮಾಡುತ್ತವೆ ಎಂಬ ಕುತೂಹಲಕಾರಿ ಅಂಶ ಅಧ್ಯಯನವೊಂದರಿಂದ ತಿಳಿದು ಬಂದಿದೆ.
ಕೆನಡಾದ ಲೆತ್ ಬ್ರಿಜ್ ಹಾಗೂ ಇಂಡೋನೇಷ್ಯಾದ ಉದ್ಯಾನ ವಿಶ್ವ ವಿದ್ಯಾಲಯಗಳ ತಜ್ಞರು ಈ ಸಂಬಂಧ ಅಧ್ಯಯನ ನಡೆಸಿದ್ದಾರೆ. ಸೆಪ್ಟೆಂಬರ್ 2015 ರಿಂದ ಆಗಸ್ಟ್ 2016 ರವರೆಗೆ 237 ದಿನಗಳಲ್ಲಿ 333 ಮಂಗಗಳ ವಿಡಿಯೋವನ್ನಿಟ್ಟು ಅಧ್ಯಯನ ನಡೆಸಲಾಗಿದೆ.
ಅವು ಕನ್ನಡಕ, ಟೋಪಿ, ಮೊಬೈಲ್ ಕವರ್, ಕ್ಯಾಮರಾ ಬ್ಯಾಗ್ ಮುಂತಾದವುಗಳನ್ನು ಕಳ್ಳತನ ಮಾಡಿ, ಅದರಲ್ಲಿ ಅತಿ ದುಬಾರಿಯ ವಸ್ತು ಯಾವುದು ಎಂಬುದನ್ನು ಗುರುತಿಸುತ್ತವೆ. ಜನ ಯಾವ ವಸ್ತುಗಳನ್ನು ತಮ್ಮಿಂದ ಮರಳಿ ಪಡೆಯಲು ಹೆಚ್ಚು ಆಸಕ್ತಿ ತೋರುತ್ತಾರೆ ಎಂಬುದರ ಆಧಾರದ ಮೇಲೆ ಮಂಗಗಳು ವಸ್ತುಗಳ ಮೌಲ್ಯ ಅಳೆಯುತ್ತವೆ ಎಂದು ಅಧ್ಯಯನ ಹೇಳುತ್ತದೆ.
ಅತಿ ದುಬಾರಿ ವಸ್ತುವನ್ನು ಗುರುತಿಸಿ, ತಮ್ಮ ತಿಂಡಿಗೆ ಬೇಡಿಕೆ ಇಡುತ್ತವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.