ಅಮೆರಿಕಾದಲ್ಲಿ ನಡೆಯುತ್ತಿರುವ ಬ್ಲಾಕ್ ಲೈವ್ ಮ್ಯಾಟರ್ ಪ್ರತಿಭಟನಾಕಾರರಿಗೆ ಭಾರತೀಯ ಮೂಲದ ವ್ಯಕ್ತಿ ಆಶ್ರಯ ನೀಡಿ ಸುದ್ದಿಯಾಗಿದ್ದಾರೆ.
ಪ್ರತಿಭಟನಾಕಾರರನ್ನು ತಮ್ಮ ಮನೆಯಲ್ಲಿ ಸ್ವಾಗತಿಸಿ ರಕ್ಷಣೆ ನೀಡಿದ ರಾಹುಲ್ ದುಬೆ, ಪೊಲೀಸರು ಹುಡುಕಿ ಮನೆಗೆ ಬಂದಾಗ ಮಾತನಾಡಿ ವಾಪಾಸು ಕಳುಹಿಸಿಬಿಡುತ್ತಿದ್ದರು.
7ಗಂಟೆ ಕರ್ಫ್ಯೂ ನಿಯಮದ ನಂತರ ವಾಷಿಂಗ್ಟನ್ ನ ಬೀದಿಗಿಳಿದ ಡಜನ್ ಗಟ್ಟಲೆ ಪ್ರತಿಭಟನಾಕಾರರಿಗೆ ಇವರು ಆಶ್ರಯ ನೀಡಿದ್ದರು. ಒಂದು ಮಾಹಿತಿ ಪ್ರಕಾರ ಅರವತ್ತು ಮಂದಿಗೆ ದುಬೆ ರಕ್ಷಣೆ ನೀಡಿದ್ದರಂತೆ.
ಜಾರ್ಜ್ ಫ್ಲಾಯ್ಡ್ ಹತ್ಯೆ ವಿರೋಧಿಸಿ ಸೋಮವಾರ ರಾತ್ರಿ ಹಲವಾರು ಜನರು ವಾಷಿಂಗ್ಟನ್ ನ ಬೀದಿಗಿಳಿದಿದ್ದರು. ಅವರನ್ನು ಬಂಧಿಸಲು ಪೊಲೀಸರು ಬೆನ್ನಟ್ಟಿದಾಗ ಅವರನ್ನೆಲ್ಲ ದುಬೆ ತಮ್ಮ ಮನೆಯೊಳಗೆ ಸ್ವಾಗತಿಸಿದರು.
ಪೊಲೀಸರು ಪೆಪ್ಪರ್ ಸ್ಪ್ರೇ ಸಿಂಪರಣೆ ಮಾಡಿದ್ದರಿಂದಾಗಿ ಮನೆಯಲ್ಲಿ ಆಶ್ರಯ ಪಡೆದವರು ಕಣ್ಣು ಉರಿ, ಕೆಮ್ಮಿನ ಸಮಸ್ಯೆ ಎದುರಿಸಿದ್ದರು.
ದುಬೆ ಅವರ ಕಾರ್ಯಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಲ್ಲಿನ ಮಾಧ್ಯಮಗಳು ಹಾಡಿ ಹೊಗಳಿವೆ.