ಅಮೆರಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯಾಗಿ ಜೋ ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಂಬಂಧಿಸಿದ ಸುದ್ದಿಗಳೇ ಹರಿದಾಡುತ್ತಿವೆ.
ಕಾರ್ಯಕ್ರಮದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತವರ ಪತ್ನಿ ಮಿಷೆಲ್ ಒಬಾಮಾ ಕೂಡ ಹಾಜರಿದ್ದರು. ಕಮಲಾ ಹ್ಯಾರಿಸ್ ಹಾಗೂ ಮಿಷೆಲ್ ಒಬಾಮಾ ನೇರಳೆ ಬಣ್ಣದ ಶೇಡ್ನ ಜಾಕೆಟ್ಗಳನ್ನ ಧರಿಸಿದ್ದು ಯಾಕೆ ಅನ್ನೋ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.
ತಮ್ಮ ಫ್ಯಾಶನ್ ಸೆನ್ಸ್ ಮೂಲಕವೇ ಆಗಾಗ ಸುದ್ದಿಯಾಗುವ ಮಿಷೆಲ್ ಒಬಾಮಾ, ನಿನ್ನೆ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಗಾಢ ನೇರಳೆ ಬಣ್ಣದ ಉದ್ದನೆಯ ಜಾಕೆಟ್, ವೈಡ್ ಲೆಗ್ ಟ್ರೋಸರ್ಸ್, ಬಂಗಾರ ಬಣ್ಣದ ಬೆಲ್ಟ್ ಹಾಗೂ ಕಪ್ಪು ಬಣ್ಣದ ಗ್ಲೌಸ್ ಧರಿಸಿದ್ದರು. ಅಲ್ಲದೇ ಮುಖಕ್ಕೆ ಕಪ್ಪು ಬಣ್ಣದ ಮಾಸ್ಕ್ ಕೂಡ ಹಾಕಿದ್ದರು. ಮಿಶೆಲ್ರ ಈ ಡ್ರೆಸ್ನ ಕಪ್ಪು ವರ್ಣೀಯ ವಸ್ತ್ರವಿನ್ಯಾಸಕರಾದ ಕ್ರಿಸ್ಟೋಫರ್ ಜಾನ್ ರೋಜರ್ಸ್ ಮತ್ತು ಸೆರ್ಗಿಯೋ ಹಡ್ಸನ್ ಅವರು ವಿನ್ಯಾಸಗೊಳಿಸಿದ್ದಾರೆ. ಇದೇ ತಂಡ ಕಮಲಾ ಹ್ಯಾರಿಸ್ರ ಉಡುಪನ್ನೂ ವಿನ್ಯಾಸಗೊಳಿಸಿದೆ.
ಇತ್ತ ಕಮಲಾ ಹ್ಯಾರಿಸ್ ಕೂಡ ಬೇರೆ ಶೇಡ್ನ ನೇರಳೆ ಬಣ್ಣದ ಲಾಂಗ್ ಜಾಕೆಟ್ನ್ನೇ ಧರಿಸಿದ್ದರು. ಮಾತ್ರವಲ್ಲದೇ ಅವರೂ ಕಡು ಕಪ್ಪು ಬಣ್ಣದ ಮಾಸ್ಕ್ ಹಾಗೂ ಗ್ಲೌಸ್ಗಳನ್ನ ಧರಿಸಿದ್ದರು. ಅಂದಹಾಗೆ ಇವರಿಬ್ಬರೂ ನೇರಳೆ ಬಣ್ಣದ ಡ್ರೆಸ್ ಧರಿಸಿದ್ದು ಅಚಾನಕ್ ಆಗಿ ಇಲ್ಲ. ಇದು ಬೇಕು ಅಂತಲೇ ಆಯ್ಕೆ ಮಾಡಿದ ಬಣ್ಣವಾಗಿದೆ. ತಜ್ಞ ವಸ್ತ್ರ ವಿನ್ಯಾಸಕಾರರು ಹೇಳುವ ಪ್ರಕಾರ, ಈ ಬಣ್ಣ ಡೆಮಾಕ್ರಟಿಕ್ ಪಾರ್ಟಿಯ ಕೆಂಪು ಹಾಗೂ ನೀಲಿ ಬಣ್ಣದ ಮಿಶ್ರಣವಾಗಿದೆ. ಈ ಬಣ್ಣವು ಐಕ್ಯತೆ, ಉಭಯ ಪಕ್ಷೀಯತೆ ಹಾಗೂ ಏಕತೆಯನ್ನ ಪ್ರತಿನಿಧಿಸುತ್ತದೆ.
ಅದರಲ್ಲೂ ಕಮಲಾ ಹ್ಯಾರಿಸ್ ಧರಿಸಿರುವ ಡ್ರೆಸ್ನ ಬಣ್ಣ ಇನ್ನೂ ವಿಶೇಷ ಅರ್ಥಗಳನ್ನ ಒಳಗೊಂಡಿದೆ. ಶೆರ್ಲಿ ಚಿಶೋಲ್ಮ್ ಅವರನ್ನು ಗೌರವಿಸಲು 2019 ರಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಅವರು ನಡೆಸಿದ ಅಭಿಯಾನದಲ್ಲಿ ಇದೇ ವರ್ಣದ ಉಡುಪನ್ನ ಧರಿಸಿದ್ದರು ಎಂದು ವರದಿಯಾಗಿದೆ, ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಿದ ಮೊದಲ ಕಪ್ಪು ಮಹಿಳೆ ಶೆರ್ಲಿ ಚಿಶೋಲ್ಮರ ನೆಚ್ಚಿನ ಬಣ್ಣ ಕೂಡ ಇದಾಗಿದೆ.