ಇನ್ನೊಂದೇ ವಾರದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಹಾಗೂ ಕಮಲಾ ಹ್ಯಾರೀಸ್ ಅಮೆರಿಕದ ಅತ್ಯುನ್ನತ ಹುದ್ದೆಗಳನ್ನು ಅಧಿಕೃತವಾಗಿ ಅಲಂಕರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ಬಾಲ್ಯದ ದಿನಗಳ ಚಿತ್ರಗಳನ್ನು ಹಂಚಿಕೊಂಡಿರುವ ಕಮಲಾ ಹ್ಯಾರೀಸ್, ದಿವಂಗತರಾದ ತಮ್ಮ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್‌ರನ್ನು ನೆನೆದಿದ್ದಾರೆ.
ತಮಿಳುನಾಡು ಮೂಲದವರಾದ ಕಮಲಾ ತಾಯಿ ಜಮೈಕಾ ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದರು. ಇಂಡೋ-ಜಮೈಕನ್ ಮಿಶ್ರ ಸಂಸ್ಕೃತಿಯಲ್ಲಿ ತಾವು ಬೆಳೆದುಬಂದ ಹಾದಿಯನ್ನು ಸ್ಮರಿಸಿದ ಕಮಲಾ, ತಮ್ಮ ಯಶಸ್ಸಿನ ಹಿಂದೆ ತಾಯಿಯ ತ್ಯಾಗ ಎಷ್ಟಿದೆ ಎಂದು ಪದಗಳಲ್ಲಿ ಕಟ್ಟಿ, ಇನ್‌ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ ಹಾಕಿದ್ದಾರೆ. ಕ್ಯಾಲಿಫೋರ್ನಿಯಾ ವಿವಿಯಲ್ಲಿ ವಿಜ್ಞಾನಿಗಳಾಗಿ ಜೊತೆಯಾಗಿ ಕೆಲಸ ಮಾಡುತ್ತಿದ್ದ ವೇಳೆ ಕಮಲಾ ಹೆತ್ತವರ ನಡುವೆ ಪ್ರೇಮಾಂಕುರವಾಗಿ ವಿವಾಹವಾಗಿದ್ದಾರೆ.
“ಎಂದಿಗೂ ಸುಮ್ಮನೇ ದೂರುತ್ತಾ ಕೂರಬೇಡ, ಏನಾದರೂ ಮಾಡುತ್ತಿರು ಎಂದು ನನ್ನ ತಾಯಿ ಹೇಳಿದ್ದನ್ನು ನಾನು ಪ್ರತಿನಿತ್ಯ ಅನುಸರಿಸುತ್ತಾ ಬಂದಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಲು ನೋಡುತ್ತಿದ್ದೇನೆ” ಎಂದಿದ್ದಾರೆ ಕಮಲಾ.
ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳ ಸರಣಿ ಪೋಸ್ಟ್‌ಗಳನ್ನು ಹಾಕುತ್ತಿರುವ ಕಮಲಾ ತಮ್ಮ ಜೀವನ ಪಥದಲ್ಲಿ ಕಂಡ ವಿಶೇಷ ವ್ಯಕ್ತಿಗಳು ಹಾಗೂ ಸ್ಥಳಗಳ ಬಗ್ಗೆ ಹೇಳಿಕೊಂಡಿದ್ದಾರೆ.
https://www.instagram.com/p/CJ_acgLlJxQ/?utm_source=ig_web_copy_link