ವ್ಯಾಪಕವಾಗಿ ಹರಡುತ್ತಿರುವ ಕೊರೊನಾದಿಂದ ಕಂಗೆಟ್ಟಿರುವ 82 ವರ್ಷದ ಮಹಿಳೆ ಹೊಸದೊಂದು ಉಪಾಯ ಕಂಡುಕೊಂಡಿದ್ದಾರೆ.
ಜಗತ್ತಿನಾದ್ಯಂತ ಲಕ್ಷಾಂತರ ಜನರಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದು, ಸಾವಿರಾರು ಮಂದಿ ಸಾಯುತ್ತಿದ್ದಾರೆ. ಇಷ್ಟಾದರೂ ಜನರಲ್ಲಿ ಈ ಬಗ್ಗೆ ಕಾಳಜಿ ಇಲ್ಲ. ಜನರ ನಿಷ್ಕಾಳಜಿ ಕಂಡು ಭೀತಿಗೊಂಡಿರುವ ವೃದ್ಧೆ, ತನ್ನ ರಕ್ಷಣೆಗಾಗಿ ರಟ್ಟಿನ ಪೆಟ್ಟಿಗೆಯಿಂದ ಸುರಕ್ಷಾ ಕವಚ ತಯಾರಿಸಿಕೊಂಡಿದ್ದಾರೆ.
ಕ್ಯುಬಾದ ರಸ್ತೆಯಲ್ಲಿ ಈ ವಿಶೇಷ ಸುರಕ್ಷಾ ಕವಚ ಧರಿಸಿದ ವೃದ್ಧೆ ಕಾಣಿಸಿಕೊಂಡಿದ್ದು, ಫೋಟೋ ವೈರಲ್ ಆಗಿದೆ. ಅಲ್ಲದೆ, ತನ್ನ ಸುರಕ್ಷತೆಯೊಂದಿಗೆ ಜನರಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ.
ನನ್ನಿಬ್ಬರು ಮಕ್ಕಳೂ ಅಮೆರಿಕಾದಲ್ಲಿ ಇದ್ದಾರೆ. ಅಗತ್ಯ ವಸ್ತುಗಳಿಗಾಗಿ ನಾನೇ ಮನೆ ಬಿಟ್ಟು ಹೊರ ಬರಬೇಕು. ಆದರೆ, ಹೇಗೆಂದರೆ ಹಾಗೆ ಅಡ್ಡಾಡುತ್ತಿರುವ ಜನರ ನಡುವೆ ಸೋಂಕಿರುವ ಯಾರಾದರೂ ಒಬ್ಬರು ನನ್ನ ಮುಂದೆ ಬಂದು ಕೆಮ್ಮಿದರೂ ಸಾಕು. ನನಗೆ ಕೊರೊನಾ ಅಂಟುವುದು ನಿಶ್ಚಿತ. ನಮ್ಮಂಥವರು ಪಿಪಿಇ ಕಿಟ್ ಖರೀದಿಸಿ, ಧರಿಸಲು ಸಾಧ್ಯವೇ ? ಹೀಗಾಗಿ ಔಷಧಿಯಂಗಡಿಯಿಂದ ರಟ್ಟಿನ ಬಾಕ್ಸ್ ತಂದು, ಅದನ್ನೇ ಪಿಪಿಇ ಕಿಟ್ ಹಾಗೆ ಮಾಡಿಕೊಂಡಿದ್ದೇನೆ. ನಾನು ಮನೆಯಲ್ಲಿದ್ದೇನೆ, ನೀವು ? ಎಂದೂ ಅದರ ಮೇಲೆ ಬರೆದಿದ್ದೇನೆ. ಹಲವರು ನನ್ನ ಅವತಾರ ಕಂಡು ನಗುತ್ತಾರೆ. ಕೆಲವರು ಪ್ರಶಂಸಿಸುತ್ತಾರೆ. ಯಾರ ಹೊಗಳಿಕೆಯೂ ಬೇಡ, ತೆಗಳಿಕೆಯೂ ಬೇಡ. ನನಗೆ ನನ್ನ ಆರೋಗ್ಯ ಮುಖ್ಯ ಎನ್ನುತ್ತಾರೆ ಫೆರಿದಿಯ ರೊಜಸ್.