ಭ್ರೂಣದಲ್ಲಿ ಇರುವಾಗಲೇ ತದ್ರೂಪಿ ಅವಳಿ ಮಕ್ಕಳಲ್ಲಿ ಜೆನೆಟಿಕ್ ವ್ಯತ್ಯಾಸಗಳು ಕಂಡು ಬರೋಕೆ ಶುರುವಾಗುತ್ತೆ ಅಂತಾ ಅಧ್ಯಯನವೊಂದು ಹೇಳಿದೆ. ಅವಳಿ ಮಕ್ಕಳು ತಾಯಿಯ ಒಂದೇ ಅಂಡಾಣು ಎರಡಾಗುವುದರ ಮೂಲಕ ಹುಟ್ಟುತ್ತವೆ.
ಯಾವುದೇ ಒಂದು ರೋಗಗಳ ವಿಶ್ಲೇಷಣೆಯಲ್ಲಿ ಜೆನೆಟಿಕ್ಸ್ ಹಾಗೂ ಪರಿಸರದ ಪ್ರಭಾವವನ್ನ ಪ್ರತ್ಯೇಕಿಸುವ ಸಂಶೋಧನೆಗಳಿಗೆ ತದ್ರೂಪಿ ಅವಳಿ ಮಕ್ಕಳನ್ನ ಬಳಕೆ ಮಾಡೋದು ಕ್ಲಾಸಿಕ್ ಮಾದರಿಯಾಗಿದೆ ಎಂದು ಅಮೆರಿಕ ಫಾರ್ಮಾ ಸಂಸ್ಥೆ ಅಮ್ಜೆನ್ನ ಅಂಗಸಂಸ್ಥೆಯಾದ ಐಲೆಂಡ್ ಡಿಕೋಡ್ ಜೆನೆಟಿಕ್ಸ್ನ ಮುಖ್ಯಸ್ಥ ಕರ್ರಿ ಸ್ಟೀಫನ್ ಸನ್ ಹೇಳಿದ್ದಾರೆ.
ಈ ಮಕ್ಕಳು ನೋಡೋಕೆ ಒಂದೇ ರೀತಿ ಇದ್ದರೂ ಸಹ ಅವರ ದೇಹದಲ್ಲಿರುವ ಅನುವಂಶಿಕ ರೂಪಾಂತರಗಳ ಕಾರಣದಿಂದಾಗಿ ಅವಳಿಗಳಲ್ಲಿ ಒಬ್ಬರಿಗೆ ಸಂಭವಿಸಿದ ಕಾಯಿಲೆ ಇನ್ನೊಬ್ಬರಿಗೆ ಬಾರದೇ ಇರೋ ಸಾಧ್ಯತೆ ಇದೆ ಎಂದು ಕರ್ರಿ ಹೇಳಿದ್ರು.
ಈ ಸಂಶೋಧನೆಗಾಗಿ 387 ತದ್ರೂಪಿ ಅವಳಿ ಮಕ್ಕಳು ಹಾಗೂ ಅವರ ಪೋಷಕರ ಜೀನ್ಸ್ಗಳನ್ನ ಬಳಕೆ ಮಾಡಲಾಯ್ತು. ಈ ಸಂಶೋಧನೆಯಲ್ಲಿ ಭ್ರೂಣದ ಬೆಳವಣಿಗೆ ಸಂದರ್ಭದಲ್ಲಿ ಸಂಭವಿಸುವ ಜೆನೆಟಿಕ್ ರೂಪಾಂತರಗಳನ್ನ ಸಂಶೋಧಕರು ಗಮನಿಸಿದ್ದಾರೆ. ಅವಳಿಗಳು ಸರಾಸರಿ 5.2 ಆರಂಭಿಕ ಬೆಳವಣಿಗೆಯ ರೂಪಾಂತರಗಳಿಂದ ಭಿನ್ನವಾಗಿರುತ್ತದೆ ಎಂದು ಹೇಳಿದ್ರು.