ಕೋವಿಡ್-19 ಪರೀಕ್ಷೆಯ ಬಗ್ಗೆ ಸಾಕಷ್ಟು ಅನುಮಾನಗಳು ಆಗಾಗ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗೆಗಿನ ಸತ್ಯಾಸತ್ಯತೆ ಕುರಿತಂತೆ ಭಾರೀ ಚರ್ಚೆಗಳಾಗುತ್ತಲೇ ಬಂದಿವೆ.
ಇದಕ್ಕೆ ಪುಷ್ಟಿ ಕೊಡುವಂತೆ, ಚೀನಾದಲ್ಲಿ ಮೂರು ಐಸ್‌ಕ್ರೀಂಗಳ ಮೇಲೆ ಮಾಡಲಾದ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಐಸ್‌ಕ್ರೀಂಗಳನ್ನು ತಿಂದವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಈ ಐಸ್‌ಕ್ರೀಂಗಳನ್ನು ಟಿಯಾಂಜಿನ್ ನಗರದ ಡಕಿಯಾಡೋ ಫುಡ್ ಫ್ಯಾಕ್ಟರಿ ಉತ್ಪಾದಿಸಿದೆ. ಕಂಪನಿಯು ಈ ಲಾಟ್ ನಲ್ಲಿ 4,836 ಬಾಕ್ಸ್ ಐಸ್‌ಕ್ರೀಂಗಳನ್ನು ಉತ್ಪಾದಿಸಿದ್ದು, ಇವುಗಳಲ್ಲಿ 1,812 ಬಾಕ್ಸ್‌ಗಳನ್ನು ಚೀನಾದ ಅನೇಕ ಪ್ರಾಂತ್ಯಗಳಿಗೆ ಕಳುಹಿಸಲಾಗಿದೆ. 2,089 ಬಾಕ್ಸ್‌ಗಳನ್ನು ಸೀಲ್ ಮಾಡಲಾಗಿದೆ ಎಂದು ಚೀನಾ ಡೈಲಿ ಪತ್ರಿಕೆಯಲ್ಲಿ ವರದಿಯಾಗಿದೆ.
ಕೋವಿಡ್-19 ಪಾಸಿಟಿವ್ ಆಗಿ ಕಂಡುಬಂದ ಈ ಮೂರು ಬಾಕ್ಸ್‌ಗಳು ಮಾರಾಟವಾದ ಪ್ರದೇಶದಲ್ಲಿ ಮಾರಲಾದ ಇನ್ನೂ 65 ಬಾಕ್ಸ್ ಐಸ್‌ಕ್ರೀಂಗಳು ಎಲ್ಲೆಲ್ಲಿ ಹೋಗಿವೆ ಎಂದು ಅಧಿಕಾರಿಗಳು ಶೋಧಿಸುವಲ್ಲಿ ನಿರತರಾಗಿದ್ದಾರೆ.
ಕಂಪನಿಯ 1,662 ಉದ್ಯೋಗಿಗಳು ಕ್ವಾರಂಟೈನ್‌ನಲ್ಲಿದ್ದು, ಇವರಲ್ಲಿ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ.