ಅತ್ಯಂತ ಹೆಚ್ಚು ಬಳಸಲ್ಪಟ್ಟ ಅಪ್ಲಿಕೇಶನ್‌ಗಳಲ್ಲಿ ಒಂದಾದ ಗೂಗಲ್ ಮ್ಯಾಪ್ಸ್ ನಿಮ್ಮ ಲೊಕೇಶನ್ ಹಾಗೂ ಹೋಗುತ್ತಿರುವ ಜಾಗದ ಬಗ್ಗೆ ಟ್ರಾಕ್ ಮಾಡಿಕೊಂಡು, ನಿಮ್ಮನ್ನು ನಿಖರವಾದ ಪಥದಲ್ಲಿ ಸಾಗಲು ನೆರವಾಗುತ್ತದೆ.
ರಿಯಲ್ ಟೈಮ್ ಫೀಡ್ ಮೂಲಕ ಮ್ಯಾಪ್ಸ್ ನಲ್ಲಿ ಜಗತ್ತಿನ ವಿವಿಧ ಪ್ರದೇಶಗಳ ಊರುಗಳ ಬೀದಿಗಳಲ್ಲಿ ಇರುವ ಕಾರುಗಳು, ಬೈಕ್‌ಗಳು, ಲ್ಯಾಂಪ್ ಪೋಸ್ಟ್‌ಗಳು, ಸಂಚಾರಿ ಸಿಗ್ನಲ್‌ಗಳನ್ನು 360 ಡಿಗ್ರಿ ಕ್ಯಾಮೆರಾಗಳ ಮೂಲಕ ಸೆರೆ ಹಿಡಿದು ತೋರಲಾಗಿದೆ. ಈ ಗೂಗಲ್ ಮ್ಯಾಪ್ಸ್ ಜನರ ಬದುಕನ್ನು ಸರಳವಾಗಿಸುತ್ತದೆ ಎಂದು ಹೇಳಬಹುದಾಗಿದೆ.
ಆದರೆ ಇದೇ ವಿಚಾರ ಎಲ್ಲಾ ಕಾಲಕ್ಕೂ ಅನ್ವಯವಾಗದು. ಈ ಅಪ್ಲಿಕೇಶನ್‌ನ ಬಳಕೆಯು ಪೆರುವಿನ ವ್ಯಕ್ತಿಯೊಬ್ಬರು ತಮ್ಮ ಮಡದಿಗೆ ವಿಚ್ಛೇದನ ನೀಡುವಂತೆ ಮಾಡಿದೆ. ತನ್ನ ದೇಶದ ಜನಪ್ರಿಯ ಸೇತುವೆಯೊಂದನ್ನು ತಲುಪಲು ಇರುವ ಬೆಸ್ಟ್ ಮಾರ್ಗವನ್ನು ಈ ಅಪ್ಲಿಕೇಶನ್‌ನಲ್ಲಿ ಹುಡುಕುತ್ತಿದ್ದ ಈತನಿಗೆ ಅಚ್ಚರಿಯೊಂದು ಕಾದಿತ್ತು.
ಗೂಗಲ್ ಸ್ಟ್ರೀಟ್ ವೀವ್ ಚಿತ್ರವೊಂದರಲ್ಲಿ, ನೀಲಿ ಜೀನ್ಸ್ ಹಾಗೂ ಬಿಳಿ ಟೀ-ಶರ್ಟ್ ಧರಿಸಿದ್ದ ಮತ್ತೊಬ್ಬ ವ್ಯಕ್ತಿಯೊಂದಿಗೆ ತನ್ನ ಮಡದಿ ಇರುವುದನ್ನು ನೋಡಿಬಿಟ್ಟಿದ್ದಾರೆ ಈತ. ಚಿತ್ರವನ್ನು ಝೂಮ್ ಮಾಡಿ ನೋಡಿದ ಮೇಲೆ ಅವರಿಬ್ಬರೂ ಪ್ರಣಯದಲ್ಲಿ ತೊಡಗಿರುವುದು ಕಾಣಿಸಿದೆ. ಘಟನೆ ಬಳಿಕ ಇಬ್ಬರೂ ಸಹ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.