ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಇದಕ್ಕೆ ಇನ್ನೂ ಲಸಿಕೆ ಲಭ್ಯವಾಗಿಲ್ಲದರ ಮಧ್ಯೆ ಬೋಟ್ಸ್ವಾನಾದಲ್ಲಿ ನೂರಾರು ಆನೆಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪುತ್ತಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ.
ಕೇವಲ ಮೇ ತಿಂಗಳಿನಿಂದೀಚೆಗೆ ಬೋಟ್ಸ್ವಾನಾದ ಉತ್ತರ ಒಕಾವಾಂಗೋ ಡೆಲ್ಟಾದಲ್ಲಿ 350 ಕ್ಕೂ ಅಧಿಕ ಆನೆಗಳ ಕಳೇಬರ ಪತ್ತೆಯಾಗಿದೆ. ಅದರಲ್ಲೂ ಬಹುತೇಕ ಆನೆಗಳು ನೀರಿನ ಹೊಂಡಗಳ ಬಳಿಯೇ ಸತ್ತು ಬಿದ್ದಿವೆ. ಅಲ್ಲದೆ ಸಾವನ್ನಪ್ಪಿರುವ ಆನೆಗಳ ಮುಖ ಮೇಲ್ಮುಖವಾಗಿದ್ದು, ಹೀಗಾಗಿ ಕ್ಷಣಾರ್ಧದಲ್ಲಿ ಕುಸಿದು ಬಿದ್ದು ಇವುಗಳು ಸಾವನ್ನಪ್ಪಿರಬಹುದೆಂದು ಊಹಿಸಲಾಗಿದೆ.
ಬರ ತಲೆದೋರಿರುವ ಕಾರಣಕ್ಕೆ ಈ ಆನೆಗಳ ಸಾವು ಸಂಭವಿಸಿಲ್ಲವೆಂಬುದು ತಜ್ಞರ ಅಭಿಪ್ರಾಯವಾಗಿದ್ದು, ಅಲ್ಲದೇ ಕೆಲವು ಕಡೆ ಬೇಟೆಗಾರರು ಆನೆಗಳ ಹತ್ಯೆಗೆ ವಿಷವನ್ನೂ ಬಳಸುತ್ತಾರಾದರೂ ಆ ಬಳಿಕ ಹಾಗೆ ಸಾವನ್ನಪ್ಪಿದ ಆನೆಗಳ ಮೃತ ದೇಹವನ್ನು ಇತರೆ ಪ್ರಾಣಿಗಳು ತಿಂದಿದ್ದರೆ ಅವುಗಳೂ ಸಹ ಸಾವನ್ನಪ್ಪಬೇಕಾಗಿತ್ತು. ಆದರೆ ಆ ರೀತಿಯೂ ನಡೆದಿಲ್ಲವೆಂದು ಹೇಳಲಾಗಿದೆ.
ಆನೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕಾಗಿದ್ದ ಸರ್ಕಾರ, ಮೃತ ಆನೆಗಳ ಮರಣೋತ್ತರ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಿಲ್ಲವೆನ್ನಲಾಗಿದ್ದು, ಇದರಿಂದಾಗಿ ಆನೆಗಳ ಸಾವಿಗೆ ನಿಖರ ಕಾರಣ ಅರಿಯುವುದು ಕಷ್ಟಸಾಧ್ಯವಾಗಿದೆ. ಒಟ್ಟಿನಲ್ಲಿ ಆನೆಗಳ ಸಾವಿನ ಸರಣಿ ಮುಂದುವರೆದಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.