ಕೊರೊನಾ ವೈರಸ್ ಎಲ್ಲಿಂದ ಬಂತು ಎಂಬ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ನಡೆಸಿದ ಜಂಟಿ ತನಿಖಾ ವರದಿ ಸೋರಿಕೆಯಾಗಿದೆ. ಡಬ್ಲ್ಯುಎಚ್‌ಒನ ಬಹುನಿರೀಕ್ಷಿತ ತನಿಖಾ ವರದಿ ಪ್ರಕಾರ, ವೈರಸ್ ಬೇರೆ ಜೀವಿಯಿಂದ ಮನುಷ್ಯರಿಗೆ ಹರಡಿರುವ ಸಾಧ್ಯತೆ ಹೆಚ್ಚಿದೆ. ಪ್ರಯೋಗಾಲಯದಿಂದ ಕೊರೊನಾ ವೈರಸ್ ಹರಡಿರುವ ಸಾಧ್ಯತೆ ಬಹಳ ಕಡಿಮೆ ಇದೆ ಎಂದು ವರದಿ ತಿಳಿಸಿದೆ.
ಡಬ್ಲ್ಯುಎಚ್‌ಒ ತನಿಖಾ ವರದಿಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಪ್ರಯೋಗಾಲಯದಿಂದ ವೈರಸ್ ಸೋರಿಕೆ ಹೊರತುಪಡಿಸಿ ಪ್ರತಿಯೊಂದು ಕ್ಷೇತ್ರದಲ್ಲೂ ಹೆಚ್ಚಿನ ಸಂಶೋಧನೆಗಳನ್ನು ವರದಿಯಲ್ಲಿ ಪ್ರಸ್ತಾಪಿಸಿದೆ. ವರದಿಯ ಬಿಡುಗಡೆಯು ವಿಳಂಬವಾಗಿರುವುದು ಅನೇಕ ಸಂಶಯಗಳನ್ನು ಹುಟ್ಟು ಹಾಕಿದೆ. ಚೀನಾ ವರದಿ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಸಾಂಕ್ರಾಮಿಕ ರೋಗ ಹರಡಲು ಚೀನಾ ಕಾರಣ ಎಂಬ ತೀರ್ಮಾನಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಮುಂದಿನ ಕೆಲವು ದಿನಗಳಲ್ಲಿ ತನಿಖಾ ವರದಿಯನ್ನು ಬಿಡುಗಡೆ ಮಾಡಲು ಸಿದ್ಧ ಎಂದು ಡಬ್ಲ್ಯುಎಚ್‌ಒ ಅಧಿಕಾರಿಯೊಬ್ಬರು ಕಳೆದ ವಾರ ತಿಳಿಸಿದ್ದರು. ಮಾಹಿತಿ ಪ್ರಕಾರ, ತನಿಖಾ ವರದಿ ಬಹುತೇಕ ಅಂತಿಮ ಹಂತದಲ್ಲಿದೆ. ತನಿಖಾ ವರದಿಯನ್ನು ಕೊನೆಯ ಗಳಿಗೆಯಲ್ಲಿ ಬದಲಾಯಿಸಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕೊರೊನಾ ವೈರಸ್ ಹರಡಿದ ನಾಲ್ಕು ಸನ್ನಿವೇಶಗಳನ್ನು ಸಂಶೋಧಕರು ವಿವರಿಸಿದ್ದಾರೆ. ಕೊರೊನಾ ವೈರಸ್ ಬಾವಲಿಗಳಿಂದ ಮತ್ತೊಂದು ಪ್ರಾಣಿಗೆ ಹರಡಿತು. ಅಲ್ಲಿಂದ ಅದು ಮನುಷ್ಯರಿಗೆ ಬಂತು ಎಂದು ಅಂತಿಮ ತೀರ್ಮಾನಕ್ಕೆ ಬರಲಾಗ್ತಿದೆ. ಕೊರೊನಾ ವೈರಸ್ ಬಾವಲಿಗಳಿಂದ ನೇರವಾಗಿ ಮನುಷ್ಯರಿಗೆ ಹರಡುವ ಸಾಧ್ಯತೆ ಕಡಿಮೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಕೊರೊನಾ ವೈರಸ್ ಗೆ ಹೋಲುವ ವೈರಸ್ ಬಾವಲಿಗಳಲ್ಲಿ ಕಂಡು ಬಂದಿದೆ. ಕೋಲ್ಡ್ ಚೈನ್ ಫುಡ್ ಮೂಲಕ ಕೊರೊನಾ ವೈರಸ್ ಹರಡಲು ಸಾಧ್ಯವಿದೆ. ಆದರೆ ಇದರ ಸಾಧ್ಯತೆ ಕಡಿಮೆ ಎಂದವರು ಹೇಳಿದ್ದಾರೆ. ಪ್ಯಾಂಗೊಲಿನ್‌ಗಳಲ್ಲಿ ಹೆಚ್ಚು ಹೋಲುವ ವೈರಸ್‌ಗಳು ಕಂಡುಬಂದಿವೆ. ಆದರೆ ಮಿಂಕ್ ಪ್ರಾಣಿ ಮತ್ತು ಬೆಕ್ಕುಗಳು ಕೊರೊನಾ ವೈರಸ್‌ಗೆ ತುತ್ತಾಗುತ್ತವೆ. ಅವುಗಳಿಂದಲೂ ಮನುಷ್ಯರಿಗೆ ವೈರಸ್ ಬಂದಿರುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.