ಟೆನ್ನೆಸ್ಸೀ: ಮಾದಕ ವ್ಯಸನದಿಂದ ಆಕೆ ಎಲ್ಲವನ್ನೂ ಕಳೆದುಕೊಂಡಿದ್ದಳು. ವಾಸ್ತವ್ಯಕ್ಕೆ ಮನೆ ಇರಲಿಲ್ಲ. ತಿನ್ನಲು ಅನ್ನವಿರಲಿಲ್ಲ. ಮಾಡಲು ಉದ್ಯೋಗವಿರಲಿಲ್ಲ. ಆದರೆ, ಇಂದು ಆಕೆ ಸೂಪರ್ ಮಾರ್ಕೆಟ್ ಒಂದರ ವಿಶ್ವಾಸಾರ್ಹ ಉದ್ಯೋಗಿ.
ಟೆನ್ನೆಸ್ಸೀಯ ಲಾಶಾಂಡಾ ವಿಲಿಯಮ್ಸ್ ಎಂಬ ಮಹಿಳೆ ವರ್ಷದ ಹಿಂದೆ ತಮ್ಮ ಕಾರನ್ನು ಕ್ರೂಗರ್ ಸೂಪರ್ ಮಾರ್ಕೆಟ್ ಹೊರಗೆ ಪಾರ್ಕ್ ಮಾಡಿ ಅಲ್ಲಿಯೇ ಮಲಗುತ್ತಿದ್ದರು. ಎಲ್ಲಾದರೂ ಊಟ ಸಿಗುತ್ತದೆಯೇ ಎಂದು ಹುಡುಕುತ್ತಿದ್ದರು. ಬದುಕಿನ ಮೇಲೆ ಆಸೆಯನ್ನೇ ಬಿಟ್ಟಿದ್ದರು.
ಅದೇ ಮಾರ್ಕೆಟ್ ನಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ. ಕೊನೆಗೊಂದು ದಿನ ಆಕೆಯ ಕಷ್ಟ ಕಾಲಕ್ಕೆ ಅಂತ್ಯ ಬಂದಿತ್ತು. ಸೂಪರ್ ಮಾರ್ಕೆಟ್ ಮ್ಯಾನೇಜರ್ ಜಾಕಿ ವಂಡಾಲ್ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದ್ದರು. ವಿಲಿಯಮ್ಸ್ ಮೊದಲಿಗಳಾಗಿ ಅರ್ಜಿ ಸಲ್ಲಿಸಿದ್ದರು. ಕೆಲ ಹೊತ್ತು ಕಾದ ಬಳಿಕ ಆಕೆಗೆ ಉದ್ಯೋಗ ಖಚಿತವಾಯಿತು. ಮಿಲಿಯಮ್ಸ್ ಖುಷಿಗೆ ಪಾರವೇ ಇರಲಿಲ್ಲ.
ಈಗ ವಿಲಿಯಮ್ಸ್ ಸೂಪರ್ ಮಾರ್ಕೆಟ್ ನ ಅತ್ಯಂತ ವಿಶ್ವಾಸಾರ್ಹ ಉದ್ಯೋಗಿ. ಒಂದು ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡುತ್ತಾರೆ. ಅವರ ಸಹೋದ್ಯೋಗಿಗಳು ಸೇರಿ ಅವರಿಗೆ ಪೀಠೋಪಕರಣ ಕೊಡಿಸಿದ್ದಾರೆ. “ಇದುವರೆಗೆ ಅಸಡ್ಡೆ, ತಿರಸ್ಕಾರ ಅಷ್ಟೇ ನೋಡಿದ್ದೆ. ಇದೇ ಮೊದಲ ಬಾರಿಗೆ ಪ್ರೀತಿ, ಸ್ನೇಹ ನೋಡಿದ್ದೇನೆ” ಎಂದು ವಿಲಿಯಮ್ಸ್ ಹಂಚಿಕೊಂಡಿದ್ದಾರೆ.