ಮಹಿಳೆಯೊಬ್ಬಳು ಬ್ಯಾಗ್ ಎತ್ತಿಕೊಳ್ಳಲು ಭಯಾನಕ ಮೊಸಳೆಗಳ ಹಿಂಡೇ ಇರುವ ಕೊಳದಲ್ಲಿ ಇಳಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಮೇರಿಕಾದ ಮಿನ್ನೆಸೊಟಾದ ಸಫಾರಿ ನಾರ್ತ್ ವನ್ಯಜೀವಿಧಾಮದಲ್ಲಿ ಘಟನೆ ನಡೆದಿದೆ. ಕೊಳದಲ್ಲಿ ಬಿದ್ದ ಬ್ಯಾಗ್ ತರಲು ತಾಯಿ – ಮಗ ಕೊಳದ ಬಳಿ ಇಳಿದಿದ್ದರು. ತಾಯಿ ಒಂದಿಷ್ಟು ಕಟ್ಟಿಗೆ ಚೂರುಗಳನ್ನು ಮೊಸಳೆಗಳಿರುವ ಗುಂಪಿನ ವಿರುದ್ಧ ಎಸೆದು ಅವುಗಳ ಗಮನವನ್ನು ಬೇರೆಡೆ ತಿರುಗಿಸಿ ಉಪಾಯವಾಗಿ ಗುಲಾಬಿ ಬ್ಯಾಗ್ ಎತ್ತಿಕೊಂಡು ಬಂದಿದ್ದಾಳೆ.
ಮಗ ಮಾತ್ರ ಆತಂಕದಿಂದ ಕೊಳದ ಸುತ್ತ ಓಡಾಡುತ್ತ ಬೇಡ ಅಮ್ಮ, ಹುಶಾರು, ಮೊಸಳೆ ದಾಳಿ ಮಾಡಬಹುದು ಎಂದೆಲ್ಲ ಹೇಳುತ್ತಿರುವ ವಿಡಿಯೋವನ್ನು ಪ್ರತ್ಯಕ್ಷದರ್ಶಿಗಳು ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಮೊಸಳೆಗಳು ಆಕೆಯ ಮೇಲೆ ದಾಳಿ ಮಾಡಿಲ್ಲ. ಆದರೆ, ಇಷ್ಟೆಲ್ಲ ನಡೆದ ವಿಡಿಯೋ ವೈರಲ್ ಆಗುವವರೆಗೂ ವನ್ಯಧಾಮದ ನೌಕರರಿಗೆ ಈ ವಿಷಯ ಗೊತ್ತೇ ಇರಲಿಲ್ಲ.