ಥೈಲ್ಯಾಂಡ್: ಅಯ್ಯೋ .. ನನಗೆ ಅದಾಯ್ತು, ಇದಾಯ್ತು ಎಂದು 30 ವರ್ಷಕ್ಕೇ ಮೂರು ಲೋಕದ ಭಾರ ಹೊತ್ತಂತೆ ಆಡುವವರು ಇವರ ಕಥೆಯನ್ನೊಮ್ಮೆ ಕೇಳಲೇ ಬೇಕು. ಇವರ ಜೀವನ ಪ್ರೀತಿ ಜಗತ್ತಿನ ಎಷ್ಟೋ ಜನರಿಗೆ ಸ್ಫೂರ್ತಿದಾಯಕವಾಗಿದೆ.
ಥೈಲ್ಯಾಂಡ್ ದೇಶದ ನೋಗ್ಲುಕ್ ಚೈರುಟ್ಟಿಚೈ ಎಂಬ 63 ವರ್ಷದ ಮಹಿಳೆ ಆ ದೇಶದ ರಾಷ್ಟ್ರೀಯ ಸ್ಕೇಟಿಂಗ್ ತಂಡದ ಅತಿ ಹಿರಿಯ ಸದಸ್ಯೆ. ಎಲ್ಲರ ಜತೆ 30 ವರ್ಷದ ಯುವತಿಯಂತೆ ಸೆಣಸಿ ಅಚ್ಚರಿ ಮೂಡಿಸುತ್ತಾರೆ.
ಜನ ಅವರನ್ನು ಪ್ರೀತಿಯಿಂದ ಜೆಬ್ ಎಂದು ಕರೆಯುತ್ತಾರೆ. ದಶಕದ ಹಿಂದೆ ಅವರಿಗೆ, ಸ್ತನ ಕ್ಯಾನ್ಸರ್ ಬಾಧಿಸಿತ್ತು. ಚಿಕಿತ್ಸೆ ಹಾಗೂ ಕಿಮೋ ಥೆರಪಿ ಮಾಡಿಸಿಕೊಂಡು ಅವರು ಗುಣ ಹೊಂದಿದ್ದಾರೆ. “ಚಿಕಿತ್ಸೆ ಸಂದರ್ಭದಲ್ಲಿ ಸಂಪೂರ್ಣ ನಿತ್ರಾಣನಾಗಿದ್ದೆ. ಆದರೆ, ಸ್ಕೇಟಿಂಗ್ ಉಲ್ಲಾಸ ಶಕ್ತಿ ತುಂಬುತ್ತದೆ” ಎಂಬುದು ಜೆಬ್ ಅವರ ಅಭಿಪ್ರಾಯ. “ಆಕೆ ಸಾಹಸಮಯಿ. ಕ್ರೀಡೆಯಲ್ಲಿ ಭಾಗವಹಿಸುವುದು ಎಂದರೆ ಆಕೆಗೆ ಬಲು ಪ್ರೀತಿ” ಎಂದು 37 ವರ್ಷದ ಆಕೆಯ ಪುತ್ರ ಸೊಟಿರಾ ಹೇಳಿದ್ದಾರೆ.