ಕಳೆದ ವಾರಕ್ಕೂ ಮುನ್ನ ಒಂದೇ ಒಂದೇ ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ‍್ಯಾಲಿಯಲ್ಲಿ ಭಾಗಿಯಾಗಿರದ ಬ್ರಾಂಡನ್ನ ಫೆಲ್ಲೋಸ್, ಅಧ್ಯಕ್ಷರ ಟ್ವೀಟ್ ಒಂದನ್ನು ನೋಡಿ ಪ್ರೇರಿತರಾಗಿ ವಾಷಿಂಗ್ಟನ್‌ಗೆ ಆಗಮಿಸಿದ್ದರು. 26 ವರ್ಷದ ಈತ ಮರಗಳನ್ನು ಕಡಿದುಕೊಂಡು, ಚಿಮ್ನಿ ರಿಪೇರಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ.
“ಜನವರಿ 6ರಂದು ಡಿ.ಸಿ.ಯಲ್ಲಿ ದೊಡ್ಡ ಪ್ರತಿಭಟನೆ ಇರಲಿದೆ. ಅಲ್ಲಿ ಬಂದು ದೊಡ್ಡ ಮಟ್ಟದಲ್ಲಿ ಸೇರಿ” ಎಂದು ಡಿಸೆಂಬರ್ 19ರಂದು ಟ್ರಂಪ್ ಮಾಡಿದ್ದ ಟ್ವೀಟ್ ನೋಡಿ ಈತ ಪ್ರೇರಿತನಾಗಿದ್ದಾನೆ. ಟ್ರಂಪ್ ಭಾಷಣ ಮುಗಿಯುತ್ತಲೇ ಅಮೆರಿಕ ರಾಜಕಾರಣದ ಶಕ್ತಿ ಕೇಂದ್ರವನ್ನೇ ಮುತ್ತಿಗೆ ಹಾಕುವ ಮಟ್ಟದಲ್ಲಿ ಪ್ರತಿಭಟನೆ ಸಾಗುತ್ತದೆ ಎಂದು ಫೆಲ್ಲೋಸ್‌ಗೆ ಅರಿವೇ ಇರಲಿಲ್ಲ.
ನೋಡ ನೋಡುತ್ತಲೇ ಕ್ಯಾಪಿಟೋಲ್ ಕಾಂಪ್ಲೆಕ್ಸ್‌ನ ಕಾರ್ಯಾಲಯಗಳನ್ನು ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಉಪಾಧ್ಯಕ್ಷ ಮೈಕೆಲ್ ಪೆನ್ಸ್ ಹಾಗೂ ಕಾಂಗ್ರೆಸ್ಸಿನ ಅನೇಕ ಸದಸ್ಯರು ಬಚ್ಚಿಟ್ಟುಕೊಳ್ಳುವ ಮಟ್ಟದಲ್ಲಿ ಧೂಳೆಬ್ಬಿಸಿಬಿಟ್ಟಿದ್ದಾರೆ. ಈ ದೊಂಬಿಯಲ್ಲಿ ಉದ್ವಿಗ್ನ ಪ್ರತಿಭಟನಾಕಾರರನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಬೇಕಾಗಿ ಬಂದಿದೆ. ಘಟನೆಯಲ್ಲಿ ಐವರು ಮೃತಪಟ್ಟಿದ್ದು, ಇವರಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಒಬ್ಬ ಪ್ರತಿಭಟನಾಕಾರನೂ ಇದ್ದಾನೆ.
“ನನಗೆ ಈ ಬಗ್ಗೆ ಯಾವುದೇ ವಿಷಾದವಿಲ್ಲ” ಎನ್ನುವ ಫೆಲ್ಲೋಸ್, “ನಾನು ಯಾರಿಗೂ ಗಾಯ ಮಾಡಿಲ್ಲ, ಏನನ್ನೂ ಧ್ವಂಸ ಮಾಡಿಲ್ಲ” ಎಂದಿದ್ದಲ್ಲದೇ, ಪ್ರತಿಭಟನಾ ಸ್ಥಳದಲ್ಲಿ ತನ್ನ ಪ್ರೊಫೈಲ್ ಚಿತ್ರವನ್ನು ಅಪ್‌ಡೇಟ್ ಮಾಡಿದ ಕೂಡಲೇ ಡೇಟಿಂಗ್ ಆಪ್ ಬಂಬಲ್‌ನಲ್ಲಿ ತನ್ನ ಪ್ರೊಫೈಲ್‌ಗೆ ಭೇಟಿ ನೀಡುವವರ ಸಂಖ್ಯೆಯು ಸಿಕ್ಕಾಪಟ್ಟೆ ಹೆಚ್ಚಾಗಿದೆ ಎನ್ನುತ್ತಾನೆ.