
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಸದಾ ಕೆಂಡ ಕಾರುವ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್, ನೆನ್ನೆಯಷ್ಟೇ ಶ್ವೇತಭವನದಿಂದ ನಿರ್ಗಮಿಸಿದ ಟ್ರಂಪ್ ಗುಡ್‌ಬೈ ಹೇಳಿ ಟ್ವೀಟ್ ಮಾಡಿದ್ದಾರೆ.
ಅಮೆರಿಕದ 46ನೇ ಅಧ್ಯಕ್ಷರಾದ ಜೋ ಬಿಡೆನ್ ಪ್ರಮಾಣ ವಚನ ಸ್ವೀಕರಿಸಿದ್ದು, ಕಮಲಾ ಹ್ಯಾರೀಸ್ ಉಪಾಧ್ಯಕ್ಷೆಯಾಗಿ ಹುದ್ದೆ ವಹಿಸಿಕೊಂಡಿದ್ದಾರೆ. ಈ ಸಮಾರಂಭದ ಮುನ್ನ, ತಮ್ಮ ನಿರ್ಗಮನದ ಭಾಷಣ ಮಾಡಿದ ಬಳಿಕ ಹೆಲಿಕಾಪ್ಟರ್ ಏರುತ್ತಿರುವ ಟ್ರಂಪ್ ಅವರ ಚಿತ್ರವೊಂದು ವೈರಲ್ ಆಗಿದೆ.
ಇದೇ ಚಿತ್ರವನ್ನು ಪೋಸ್ಟ್ ಮಾಡಿರುವ ಗ್ರೇಟಾ, “ಸುಂದರವಾದ ಭವಿಷ್ಯವನ್ನು ಮುದುಕ ಎದುರು ನೋಡುತ್ತಿದ್ದಾನೆ ಎನಿಸುತ್ತದೆ. ನೋಡಲು ಬಹಳ ಖುಷಿಯಾಗುತ್ತದೆ…!” ಎಂದು ಹೇಳಿಕೊಂಡಿದ್ದಾಳೆ.
ಟ್ರಂಪ್ ಅಧ್ಯಕ್ಷರಾಗಿದ್ದ ವೇಳೆ ನಡೆದಿದ್ದ ವಿಶ್ವ ಸಂಸ್ಥೆಯ ಹವಾಮಾನ ಶೃಂಗವೊಂದರಲ್ಲಿ ಸ್ಟೇಜ್ ಪ್ರವೇಶಿಸಿ ಮಾತನಾಡಿದ್ದ ಗ್ರೇಟಾ, ಟ್ರಂಪ್‌ರನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಳು. ಈ ಘಟನೆ ಬಳಿಕ ಜಾಗತಿಕ ಮಾಧ್ಯಮಗಳ ವಂಡರ್‌ಗರ್ಲ್ ಆಗಿದ್ದಾಳೆ ಈ ಟೀನೇಜರ್.