ಏನಾದರೂ ಕಳೆದು ಹೋದರೆ, ಹಣೆಬರಹಕ್ಕೆ ಹೊಣೆ ಯಾರು. ಕಳೆದು ಹೋದ ವಸ್ತುಗಳು ಸಿಗುವುದಿಲ್ಲವೆಂದು ಸುಮ್ಮನೆ ಕೂತುಕೊಳ್ಳುವವರು ಈ ಸುದ್ದಿಯನ್ನು ನೋಡಲೇಬೇಕು. ಹೌದು, ಬರೋಬ್ಬರಿ 16 ವರ್ಷದ ಹಿಂದೆ ಕಳುವಾಗಿದ್ದ ಹ್ಯಾಂಡ್ ಬ್ಯಾಗ್ ಇದೀಗ ಸಿಕ್ಕಿದೆ.
ಆಸ್ಟ್ರೇಲಿಯಾದ ನ್ಯೂ ಸೌಥ್ ವೇಲ್ಸ್‌ನ ಮೊರೇ ಎನ್ನುವ ಸ್ಥಳದಲ್ಲಿರುವ ಮಾಲ್ ಒಂದರಲ್ಲಿ ಕಳೆದ 2004ರಲ್ಲಿ ಕಳೆದು ಹೋಗಿದ್ದ ಹ್ಯಾಂಡ್ ಬ್ಯಾಗ್ ಸಿಕ್ಕಿದೆ. ಇತ್ತೀಚೆಗೆ ಸ್ಥಳೀಯ ಪೊಲೀಸರಿಗೆ ಕಾರ್ ಪಾರ್ಕಿಂಗ್‌ನಲ್ಲಿ ಹ್ಯಾಂಡ್ ಬ್ಯಾಗ್ ಒಂದು ಸಿಕ್ಕಿದೆ. 2004ರಲ್ಲಿ ಕಳೆದು ಹೋದ ಬ್ಯಾಗಿಗೆ ಇದು ಹೋಲುತ್ತಿದ್ದರಿಂದ ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಇದು 2004ರ ಬ್ಯಾಗ್ ಎಂದು ಖಚಿತವಾಗಿದೆ.
ಬ್ಯಾಗ್ ಕಳೆದು ಹೋದ ಕೆಲ ದಿನದಲ್ಲಿ ಬ್ಯಾಗಿನ ಕೆಲ ವಸ್ತುಗಳನ್ನು ಪೊಲೀಸರು ಪತ್ತೆ ಹಚ್ಚಿದರೂ, ಪ್ರಮುಖ ವಸ್ತುಗಳು ಹಾಗೂ ಬ್ಯಾಗ್ ಸಿಕ್ಕಿರಲಿಲ್ಲ. ಆದರೀಗ ಈ ಬ್ಯಾಗ್ ಹಾಗೂ ಅದರಲ್ಲಿನ ವಸ್ತುಗಳು ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಇದೀಗ ಬ್ಯಾಗ್ ಕಳೆದುಕೊಂಡ ವಾರಸುದಾರರನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.