ಕ್ರಿಶ್ಚಿಯನ್ ಮದುವೆಗಳಲ್ಲಿ ಈಕೆಯನ್ನು ಮದುವೆಯಾಗಲು ಇಷ್ಟಪಡುತ್ತೀಯಾ ಎಂದು ಪಾದ್ರಿಗಳು ವರನನ್ನು ಪ್ರಶ್ನಿಸಿದಾಗ “ಯಸ್ ಐ ಡು” ಎಂದು ಒಪ್ಪಿಗೆ ಸೂಚಿಸುವುದು ವಾಡಿಕೆ. ಆದರೆ, ವರನೊಬ್ಬ ಹಾಗೆ ಮಾಡುವ ಬದಲು ಸ್ವಲ್ಪ ತಾಳು ಎಂದು ಹೇಳುವ ಮೂಲಕ ವಧುವಿನಲ್ಲಿ ಆತಂಕ ಮೂಡಿಸಿದ್ದ.
ಮದುವೆಯಲ್ಲಿ ಆಗಬಾರದ್ದೇನೂ ಆಗಿಲ್ಲ. ಹಾಸ್ಯಮಯವಾಗಿದ್ದ ಆ ಮದುವೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ತನ್ನ ಮದುವೆಯಲ್ಲಿ ಹಾಸ್ಯಮಯ ಪ್ರಾಂಕ್ ಮಾಡಲು ಮೊದಲೇ ಎಲ್ಲ ಸಿದ್ಧ ಮಾಡಿಕೊಂಡಿದ್ದ ವರ, ವಧುವನ್ನು ಮದುವೆಯಾಗುತ್ತೀಯಾ ಎಂದು ಕೇಳುತ್ತಿದ್ದಂತೆ ಸ್ವಲ್ಪ ತಾಳಿ ಎಂದು ತನ್ನ ಸ್ನೇಹಿತರ ಜತೆ ತೆರಳಿ ಚರ್ಚಿಸುತ್ತಾನೆ. ನಂತರ ಬಂದು ಮದುವೆಗೆ ಒಪ್ಪಿಗೆ ಸೂಚಿಸುತ್ತಾನೆ.
“ಇಂಥ ಜೋಕ್ ನಿಮ್ಮ ಮದುವೆಯಲ್ಲಾದರೆ, ನೀವೇನು ಮಾಡುತ್ತೀರಿ…?”ಎಂಬ ಕ್ಯಾಪ್ಶನ್ ನೊಂದಿಗೆ ಯಾಶಿ ಡಿ ಜೋರ್ಡನ್ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮದುವೆಯ ವಿಡಿಯೋ ಶೇರ್ ಮಾಡಿದ್ದಾರೆ. ಆತನ ಹಾಸ್ಯದ ಸ್ವಭಾವವೇ ವಧುವಿಗೆ ಇಷ್ಟವಾಗಿರಬಹುದು ಎಂದು ಹಲವರು ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.