ವಾಷಿಂಗ್ಟನ್: ಅಮೆರಿಕದ ಗ್ರೀನ್ ಕಾರ್ಡ್ ಪಡೆಯಲು ಭಾರತೀಯರು 195 ವರ್ಷ ಕಾಯಬೇಕಿದೆ. ವಿದೇಶಿಯರಿಗೆ ಅಮೆರಿಕದ ಶಾಶ್ವತ ಪೌರತ್ವಕ್ಕೆ ಅಗತ್ಯವಾಗಿದ್ದ ಗ್ರೀನ್ ಕಾರ್ಡ್ ಪಡೆಯಲು ಈಗಿರುವ ನಿಯಮಗಳ ಪ್ರಕಾರ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿರುವ ಭಾರತೀಯರಿಗೆ 195 ವರ್ಷ ಬೇಕಾಗುತ್ತದೆ ಎಂದು ಅಮೆರಿಕದ ರಿಪಬ್ಲಿಕ್ ಪಕ್ಷದ ಸಂಸದ ಮೈಕ್ ಲೀ ತಿಳಿಸಿದ್ದಾರೆ.
ಸಂಸದ ಡಿಕ್ ಡರ್ಬಿನ್ ಮಂಡಿಸಿದ ಗ್ರೀನ್ ಕಾರ್ಡ್ ಬ್ಯಾಕ್ ಲಾಗ್ ಕಾರಣಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಉದ್ಯೋಗಿಗಳು ಮತ್ತು ಅವರ ಮಕ್ಕಳನ್ನು ರಕ್ಷಿಸುವ ವಿಧೇಯಕ ಬೆಂಬಲಿಸಿ ಕೈಕ್ ಲೀ ಮಾತನಾಡುವಾಗ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಈಗಾಗಲೇ ಗ್ರೀನ್ ಕಾರ್ಡ್ ಪಡೆದುಕೊಂಡ ಸಾಕಷ್ಟು ಜನರ ಮಕ್ಕಳಿಗೆ ಹೊಸ ಗ್ರೀನ್ ಕಾರ್ಡ್ ಪಡೆಯಲು ಸಾಧ್ಯವಾಗುತ್ತಿಲ್ಲ. ಅವರಿಗೆ ಕೆಲಸ ಸಿಕ್ಕಿಲ್ಲ ಎಂಬ ಕಾರಣಕ್ಕೆ ಗ್ರೀನ್ ಕಾರ್ಡ್ ನಿರಾಕರಿಸಲಾಗುತ್ತಿದೆ. ಭಾರತದಿಂದ ಬಂದ ವ್ಯಕ್ತಿ ಇಬಿ -3 ಗ್ರೀನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಅದನ್ನು ಪಡೆಯಲು 195 ವರ್ಷ ಕಾಯುವ ಪರಿಸ್ಥಿತಿ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಅಮೆರಿಕಕ್ಕೆ ವಲಸೆ ಬರುವ ಬೇರೆ ದೇಶದ ಪ್ರಜೆಗಳಿಗೆ ಗ್ರೀನ್ ಕಾರ್ಡ್ ಕಾಯಂ ವಾಸ್ತವ್ಯದ ಹಕ್ಕು ನೀಡುತ್ತದೆ. ಈ ನಿಯಮಾವಳಿಯನ್ನು ಪರಿಷ್ಕರಿಸಬೇಕೆಂದು ಹೇಳಲಾಗಿದ್ದು, ಸಾಧಕ, ಬಾಧಕಗಳ ಕುರಿತಾಗಿ ಭಾರೀ ಚರ್ಚೆ ನಡೆದಿದೆ.