ನ್ಯೂಯಾರ್ಕ್: ಮನೆಯಿಂದಲೇ ಆನ್ ಲೈನ್ ನಲ್ಲಿ ನಡೆಸುವ ವರ್ಚುವಲ್ ಮೀಟಿಂಗ್, ಸಂದರ್ಶನಗಳಿಂದ ಉಂಟಾಗುವ ಹಲವು ಮೋಜಿನ, ಕೆಲವು ಮುಜುಗರದ ಸಂಗತಿಗಳನ್ನು ಈ ಹಿಂದೆ ನೋಡಿದ್ದೇವೆ. ಈಗ ಅಂಥದ್ದೇ ನಗೆಯುಕ್ಕಿಸುವ ವಿಡಿಯೋವೊಂದನ್ನು ಅಮೆರಿಕಾದ ಎಂ.ಎಸ್.ಎನ್.ಬಿ.ಸಿ. ಸುದ್ದಿ ವಾಹಿನಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.
ಅಮೆರಿಕಾದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಕುರಿತು ಎಂ.ಎಸ್.ಎನ್.ಬಿ.ಸಿ. ಚಾನಲ್ ಲೈವ್ ನಲ್ಲಿ ಮಕ್ಕಳ ತಜ್ಞ ಹಾಗೂ ನ್ಯೂಯಾರ್ಕ್ ಮೇಯರ್ ಬಿಲ್-ಡೆ-ಬಾಸಿಯೊ ಅವರ ವೈದ್ಯಕೀಯ ಸಲಹೆಗಾರ ಡಾ.ಇರ್ವಿನ್ ರೆಡ್ಲೇನರ್ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರ ಮೊಮ್ಮಗ ಲೈವ್ ನಲ್ಲಿ ಕಾಣಿಸಿಕೊಂಡಿದ್ದಾನೆ.
ಐದರಿಂದ ಆರು ವರ್ಷದ ಬಾಲಕ ಬಂದು ಕ್ಯಾಮರಾ ಎದುರು ಇಣುಕುತ್ತಾನೆ. ಅದನ್ನು ತಪ್ಪಿಸಲು ಡಾ. ಇರ್ವಿನ್ ಆತನನ್ನು ಆಚೆ ನೂಕಲು ಯತ್ನಿಸುತ್ತಾರೆ. ಆದರೂ ಬಿಡದ ಬಾಲಕ ಅತ್ತಿಂದಿತ್ತ. ಓಡಾಡುತ್ತಾನೆ. ನಂತರ ಒಮ್ಮೆ ತನ್ನ ಅಜ್ಜ ಕುಳಿತ ಕುರ್ಚಿಯ ಹಿಂಬದಿಯಿಂದ ಮೇಲೇರಿ ಕ್ಯಾಮರಾಕ್ಕೆ ಮುಖ ಕಾಣಿಸುತ್ತಾನೆ. ಇದನ್ನು ನೋಡಿ ಟಿವಿ ಆ್ಯಂಕರ್ ಹಾಗೂ ಸಹ ಆ್ಯಂಕರ್ ಇಬ್ಬರು ನಗುತ್ತಾರೆ. ಗಂಭೀರ ಚರ್ಚೆಯ ಸಂದರ್ಭದಲ್ಲಿ ಉಂಟಾದ ಮೋಜಿನ ಸನ್ನಿವೇಶವನ್ನು ನ್ಯೂಸ್ ಚಾನಲ್ ಯಥಾವತ್ತಾಗಿ ಹಂಚಿಕೊಂಡಿದೆ.