ಕೇಂದ್ರ ಜರ್ಮನಿಯ ವಸತಿ ಪ್ರದೇಶವೊಂದರಲ್ಲಿರುವ ಸಮುದಾಯವೊಂದಕ್ಕೆ ಶಾಕ್ ಆಗುವ ಸುದ್ದಿಯೊಂದನ್ನು ಇತ್ತೀಚೆಗೆ ಇಹಲೋಕ ತ್ಯಜಿಸಿದ ಮಹಿಳೆಯೊಬ್ಬರು ಕೊಟ್ಟಿದ್ದಾರೆ.
ಈ ಮಹಿಳೆ ತಮ್ಮ ಹೆಸರಿನಲ್ಲಿದ್ದ 7.5 ದಶಲಕ್ಷ ಡಾಲರ್ (55 ಕೋಟಿ ರೂ.ಗಳು) ಆಸ್ತಿಯನ್ನು ತಮ್ಮ ಸಮುದಾಯದಲ್ಲಿರುವ ಜನರಿಗೆ ಬರೆದಿಟ್ಟಿದ್ದಾರೆ.
ವಾಯ್ಪರ್‌ಫಲ್ಡನ್ ಪ್ರದೇಶದಲ್ಲಿ ವಾಸವಿದ್ದ ರನೇಟ್ ವಡಲ್ ತಮ್ಮ ಪತಿ ಆಲ್ಫರ್ಡ್ ವಡಲ್ ಜೊತೆಯಲ್ಲಿ 1975ರಿಂದ ಸಂಸಾರ ಮಾಡಿಕೊಂಡು ಇದ್ದರು. ಶೇರು ಮಾರುಕಟ್ಟೆಯಲ್ಲಿ ಭಾರೀ ಯಶಸ್ಸು ಕಂಡ ಆಲ್ಫರ್ಡ್ 2014ರಲ್ಲಿ ಮೃತಪಟ್ಟರು. ಫ್ರಾಂಕ್‌ಫರ್ಟ್‌ನ ನರ್ಸಿಂಗ್ ಹೋಂನಲ್ಲಿ 2016ರಿಂದ ಶುಶ್ರೂಷೆ ಪಡೆಯುತ್ತಿದ್ದ ರನೇಟ್ 2019ರಲ್ಲಿ ತಮ್ಮ 81ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ರನೇಟ್ ಆಸ್ತಿಗೆ ವಾರಸುದಾರಗಬೇಕಿದ್ದ ಅವರ ಸಹೋದರಿ ಅದಾಗಲೇ ಮೃತಪಟ್ಟಿದ್ದಾರೆ.
ಸಮುದಾಯದ ಸರ್ವರ ಒಳಿತೆಗೆ ಆಗಬಲ್ಲ ಮೂಲ ಸೌಕರ್ಯ ಸೃಷ್ಟಿಸಲು ಈ ಆಸ್ತಿಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ರನೇಟ್ ವಿಲ್‌ನಲ್ಲಿ ತಿಳಿಸಿದ್ದಾರೆ. ಈ ದುಡ್ಡನ್ನು ಬೈಸಿಕಲ್ ಪಥಗಳು, ಕಟ್ಟಡಗಳು ಹಾಗೂ ಕಿಂಡರ್ ಗಾರ್ಟನ್ ಶಾಲೆಯೊಂದನ್ನು ಕಟ್ಟಲು ಬಳಸಲಾಗುವುದು ಎಂದು ಆ ಊರಿನ ಮೇಯರ್ ಸ್ಥಳೀಯ ಪತ್ರಿಕೆಯೊಂದಕ್ಕೆ ಹೇಳಿಕೆ ಕೊಟ್ಟಿದ್ದಾರೆ.