ದುಬೈ: ಯುಎಇ ದೇಶದ ಕ್ಯಾಬ್ ಡ್ರೈವರ್ ಹಸನ್ ಸೈಯದ್ ಬಹುಭಾಷಾ ಜ್ಞಾನ ನೋಡಿದರೆ ಎಂಥವರೂ ಮರುಳಾಗಬೇಕು. ಅವರು ಬೇರೆ ಬೇರೆ ದೇಶಗಳ 10 ಭಾಷೆಗಳನ್ನು ಮಾತನಾಡಬಲ್ಲರು.
ಖಲೀಜ್ ಟೈಮ್ಸ್ ವರದಿಗಾರ ಅಭಿಷೇಕ್ ಸೇನ್ ಗುಪ್ತಾ ಎಂಬುವವರು ಅವರೊಟ್ಟಿಗೆ ವಿವಿಧ ಭಾಷೆಗಳಲ್ಲಿ ಮಾಡಿದ ಸಂದರ್ಶನ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾಷೆಗಳ ಗಡಿಯನ್ನು ಮೀರಿ ಆರೋಗ್ಯಕರ ಸಮಾಜ ನಿರ್ಮಿಸಲು, ಹೊಸ ಅವಕಾಶ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಬಹು ಭಾಷೆ ಕಲಿಯುತ್ತಿರುವುದಾಗಿ ಹಸನ್ ಸೈಯದ್ ಹೇಳಿದ್ದಾರೆ.
ಹಸನ್ ಮೂಲತಃ ಪಾಕಿಸ್ತಾನದ ಪೇಶಾವರದವರು. ಅವರು ವೈದ್ಯರಾಗುವ ಇಚ್ಛೆ ಹೊಂದಿದ್ದರು. ವೈದ್ಯಕೀಯ ಕಾಲೇಜ್ ಸೇರಿ ಮೂರು ತಿಂಗಳಾಗುವ ಹೊತ್ತಿಗೆ ಅವರ ಪತ್ನಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿತು. ಆಕೆಯ ಚಿಕಿತ್ಸೆಗಾಗಿ ಅವರು ದುಬೈಗೆ ಹೋದರು. ಅಲ್ಲಿ ಮೊದಲು ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿದರು. ಆಗಿನಿಂದಲೇ ವಿವಿಧ ಭಾಷೆ ಕಲಿಯಲು ಪ್ರಾರಂಭಿಸಿದರು. ಗೂಗಲ್ ಟ್ರಾನ್ಸ್ ಲೇಟ್, ವಿವಿಧ ಇ ಲರ್ನಿಂಗ್ ಆ್ಯಪ್ ಗಳ ಮೂಲಕವೇ ಅವರು ವಿವಿಧ ಭಾಷೆ ಕಲಿತಿದ್ದಾರೆ.
ಉರ್ದು, ಹಿಂದಿ, ಮಲೆಯಾಳಿ, ಇಂಗ್ಲಿಷ್, ಚೀನಿ, ರಷ್ಯನ್, ಅರೇಬಿಕ್, ಪಾರ್ಸಿ, ಟಾಗಾಲಾಂಗ್, ಪಾಸ್ಟೊ ಭಾಷೆಗಳು ಸೈಯದ್ ಗೆ ಬರುತ್ತವೆ. ಇನ್ನೂ ಕೆಲ ಭಾಷೆಗಳನ್ನು ಕಲಿಯುತ್ತಿದ್ದಾರೆ.