ಈ ಕೋವಿಡ್-19 ಲಾಕ್‌ಡೌನ್‌ನಿಂದ ನಿಧಾನವಾಗಿ ಆಚೆ ಬರಲು ಮಾನವ ಜಗತ್ತು ಥರಾವರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಜಗತ್ತಿನಾದ್ಯಂತ ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ತಿಂಗಳುಗಳಿಂದ ಮುಚ್ಚಿದ್ದು ಮತ್ತೆ ತಂತಮ್ಮ ಬಾಗಿಲುಗಳನ್ನು ತೆರೆಯುವುದು ಹೇಗೆ ಎಂಬ ಆಲೋಚನೆಯಲ್ಲಿ ತೊಡಗಿವೆ.
ಕಳೆದ ಮೂರೂವರೆ ತಿಂಗಳುಗಳಿಂದ ಶಾಲೆಯತ್ತ ಬಂದಿರದ ಥಾಯ್ಲೆಂಡ್‌ನ ಶಾಲಾ ಮಕ್ಕಳು ಇದೀಗ ನಿಧಾನವಾಗಿ ಮರಳಿ ಶಾಲೆಗೆ ಬರುತ್ತಿದ್ದಾರೆ. ಕೊರೋನಾ ವೈರಸ್ ಮಕ್ಕಳಲ್ಲಿ ಹಬ್ಬದಂತೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಥಾಯ್ಲೆಂಡ್ ಶಾಲೆಗಳು ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಂಡಿವೆ.
ಇದೇ ವೇಳೆ, ಬ್ಯಾಂಕಾಕ್‌ನಿಂದ 50 ಕಿಮೀ ದೂರದಲ್ಲಿರುವ ಶಾಮ್ಕಾಕ್ ಎಂಬ ಊರಿನಲ್ಲಿ ಶಾಲೆಯೊಂದು ತನ್ನ ಮಕ್ಕಳಿಗೆಂದು ಮಾಡಿಕೊಂಡಿರುವ ಬಿಗಿ ಬಂದೋಬಸ್ತ್ ಬಗ್ಗೆ ಎಲ್ಲೆಡೆ ಸುದ್ದಿಯಾಗಿದೆ. ಮಕ್ಕಳಿಗೆ ತರಗತಿಗಳು ಹಾಗೂ ಮಧ್ಯಾಹ್ನದ ಊಟದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಪ್ರೇರೇಪಿಸಲು ಮಾಡಿಕೊಂಡಿರುವ ವ್ಯವಸ್ಥೆಯು ಚುನಾವಣೆಯ ವೇಳೆ ಮತದಾನ ಮಾಡಲು ಮಾಡಿಕೊಂಡ ಸಿದ್ಧತೆಯಂತೆ ಕಾಣುತ್ತಿದೆ.
ಒಂದೊಂದು ಬೆಂಚ್ ಗೂ ಬಾಕ್ಸ್‌ಗಳನ್ನು ಮಾಡಿರುವುದಲ್ಲದೇ, ಕಡ್ಡಾಯವಾಗಿ ಮುಖದ ಮಾಸ್ಕ್‌ಗಳನ್ನು ಧರಿಸಬೇಕೆಂಬ ನಿಯಮಗಳನ್ನೂ ಸಹ ಈ ವೇಳೆ ಕಟ್ಟುನಿಟ್ಟಾಗಿ ಶಾಲೆ ಅನುಷ್ಠಾನಕ್ಕೆ ತಂದಿದೆ.