ಹೀಗೂ ಉಂಟೇ ಎಂದು ಅಚ್ಚರಿ ಪಡುವ ಬೆಳವಣಿಗೆಯೊಂದರಲ್ಲಿ ಫ್ರಾನ್ಸ್‌ನ ಗ್ರಿಂಗ್ನಾಲ್ಸ್ ಗ್ರಾಮದ ಕೊಳದಲ್ಲಿರುವ ಕಪ್ಪೆಗಳನ್ನು ತೆರವುಗೊಳಿಸಲು ಅಲ್ಲಿನ ನ್ಯಾಯಾಲಯವೊಂದು ಆದೇಶ ಕೊಟ್ಟಿದೆ.
ಈ ಊರಿನ ವಾಸಿಗಳಾದ ಮೈಕೆಲ್ ಹಾಗೂ ಅನ್ನಿ ಪೆಚೆರಾಸ್ ದಂಪತಿ ಈ ಕೊಳದಲ್ಲಿರುವ ಕಪ್ಪೆಗಳು ಸಿಕ್ಕಾಪಟ್ಟೆ ಸದ್ದು ಮಾಡುವ ಕಾರಣ 300 ಚದರ ಮೀಟರ್ ವಿಸ್ತೀರ್ಣದ ಕೊಳದಲ್ಲಿರುವ ನೀರನ್ನು ತೆರವುಗೊಳಿಸಲು ಕೋರಿ ಕಳೆದ 9 ವರ್ಷಗಳಿಂದ ನ್ಯಾಯಾಂಗ ಸಮರ ನಡೆಸುತ್ತಿದ್ದಾರೆ. ಸಮಾಗಮದ ಕಾಲದಲ್ಲಿ ಈ ಕಪ್ಪೆಗಳು ಮಾಡುವ ಸದ್ದಿನಿಂದ 61 ಡೆಸಿಬಲ್‌ನಷ್ಟು ಸದ್ದು ಸೃಷ್ಟಿಯಾಗಿ ಅಕ್ಕಪಕ್ಕದ ಮನೆಗಳಿಗೆಲ್ಲಾ ಕೇಳಿಸುತ್ತಿತ್ತು.
ಫ್ರಾನ್ಸ್‌ನ ಬಾಡೋ ಪಟ್ಟಣದಿಂದ 70 ಕಿಮೀ ದೂರದಲ್ಲಿರುವ ಈ ಊರಿನಲ್ಲಿ 587 ಮಂದಿ ವಾಸಿಸುತ್ತಿದ್ದಾರೆ. ಕಪ್ಪೆಗಳು ಮಾಡುತ್ತಿರುವ ಸದ್ದಿನಿಂದಾಗಿ ತಮಗೆ ನಿದ್ರೆ ಮಾಡಲು ಆಗುತ್ತಿಲ್ಲ ಎಂದು 2012ರಲ್ಲಿ ಪೆಚೆರಾಸ್ ನೆರೆಹೊರೆಯವರಾದ ಜೀನ್ ಲೂಯಿ ಮಾಲ್ಫಿಯೋನ್ ಮೊದಲಿಗೆ ದೂರು ದಾಖಲಿಸಿದ್ದರು.
ಕೊಳದ ನೀರನ್ನು ತೆರವುಗೊಳಿಸುವ ನಡೆಯಿಂದ ಸುತ್ತಲಿನ ವಾತಾವರಣದಲ್ಲಿ ಏರುಪೇರಾಗಿ, ಆರು ವಿವಿಧ ತಳಿಯ ಕಪ್ಪೆಗಳ ಉಳಿವಿನ ಮೇಲೆ ದುಷ್ಪರಿಣಾಮವಾಗಲಿದೆ ಎಂದು ಪ್ರಾಣಿ ಪ್ರಿಯರ ಸಂಘಟನೆಗಳು ಈ ತೀರ್ಪು ಕೊಟ್ಟ ನ್ಯಾಯಾಧೀಶರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.