ಕಾಡು ಪ್ರಾಣಿಯನ್ನು ಸಾಕುವ ಶೋಕಿಯಲ್ಲಿ ಫ್ರಾನ್ಸ್‌ನ ಜೋಡಿಯೊಂದು ಹುಲಿ ಮರಿಯೊಂದನ್ನು ಖರೀದಿ ಮಾಡಿದೆ.
ಲೂ ಹಾವ್ರೇ, ಬಂದರು ನಗರದ ನಾರ್ಮಂಡಿ ಸವನ್ನಾ ಪ್ರದೇಶದ ದೊಡ್ಡ ಬೆಕ್ಕೊಂದನ್ನು ಖರೀದಿ ಮಾಡಲು ಮುಂದಾಗಿದ್ದರು. ಆಫ್ರಿಕಾದ ಸರ್ವಲ್ ಹೆಸರಿನ ಬೆಕ್ಕು ಹಾಗೂ ಸಾಕು ಬೆಕ್ಕಿನ ಕ್ರಾಸ್ ಬ್ರೀಡ್ ಅನ್ನು ಮನೆಯಲ್ಲಿ ಸಾಕುವುದು ಫ್ರಾನ್ಸ್‌ನಲ್ಲಿ ಅಧಿಕೃತವಾಗಿದೆ.
ಆರು ಸಾವಿರ ಯೂರೋಗಳನ್ನು ತೆತ್ತು ಮನೆಗೆ ಈ ಸಾಕು ಪ್ರಾಣಿಯನ್ನು ತಂದಿದ್ದಾರೆ. ಒಂದು ವಾರದ ಮಟ್ಟಿಗೆ ಸಾಕಿದ ಬಳಿಕ ಯಾಕೋ ಬೆಕ್ಕು ಬೇರೆ ಥರ ಕಾಣುತ್ತಿದೆ ಎಂಬ ಅನುಮಾನ ಬಂದು ಪರೀಕ್ಷಿಸಿದಾಗ ಅದು ಸುಮಾತ್ರನ್ ಹುಲಿ ಮರಿ ಎಂದು ತಿಳಿದುಬಂದಿದೆ. ಇದೇ ಹುಲಿ ಮರಿಯೊಂದಿಗೆ ತೆಗೆದಿದ್ದ ಕೆಲ ಸೆಲ್ಫಿಗಳು ಬಹಳಷ್ಟು ದಿನಗಳಿಂದ ಸದ್ದು ಮಾಡುತ್ತಿದ್ದವು.
ಈ ಘಟನೆಯಿಂದಾಗಿ ಎರಡು ವರ್ಷಗಳಿಂದ ಸಾಗುತ್ತಿರುವ ಪ್ರಾಣಿ ಕಳ್ಳಸಾಗಾಟದ ತನಿಖೆಯೊಂದಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಈ ಸಂಬಂಧ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂಡೋನೇಷ್ಯಾದಿಂದ ಫ್ರಾನ್ಸ್‌ಗೆ ಈ ಬೆಕ್ಕನ್ನು ಕದ್ದು ತಂದ ಜಾಡನ್ನು ಹಿಡಿದು ಪೊಲೀಸರು ತನಿಖೆ ನಡೆಸುತ್ತಿದ್ದರು.
ಇದೀಗ ವಶಕ್ಕೆ ಪಡೆಯಲಾದ ಹುಲಿ ಮರಿಯನ್ನು ಫ್ರಾನ್ಸ್‌ನ ಜೀವವೈವಿಧ್ಯ ಇಲಾಖೆಗೆ ಒಪ್ಪಿಸಲಾಗಿದ್ದು, ತನಿಖೆ ಪೂರ್ಣಗೊಂಡಂತೆ ಆಗಿದೆ.