ಫ್ರೆಂಚ್ ಕ್ಲೈಂಬರ್ ಅಲೈನ್ ರಾಬರ್ಟ್ ಜರ್ಮನಿಯ ಫ್ರಾಂಕ್‌ಫರ್ಟ್‌ನ ಗಗನಚುಂಬಿ ಕಟ್ಟಡವೊಂದನ್ನು ಏರುವ ಮೂಲಕ ಎಲ್ಲರ ಹುಬ್ಬೇರಿಸುತ್ತಿದ್ದಾರೆ. ಜರ್ಮನಿಯ ರೈಲ್ವೇ ಇಲಾಖೆ ಡಾಯಟ್ಶೆ ಬಾಹ್ನ್‌ನ ಕಾರ್ಯಾಲಯವಾದ ಈ 166 ಮೀಟರ್ ಎತ್ತರವನ್ನು ರಾಬರ್ಟ್ ಹತ್ತಿದ್ದಾರೆ.
ಸಿಲ್ವರ್ ಸೂಟ್ ಹಾಗೂ ಕೌಬಾಯ್ ಬೂಟುಗಳನ್ನು ಧರಿಸಿದ್ದ ರಾಬರ್ಟ್ ಕಟ್ಟಡ ತುತ್ತತುದಿಯನ್ನು ಏರಲು ಸಫಲರಾಗಿದ್ದರು. ತಮ್ಮ ಡೇರ್‌ಡೆವಿಲ್ ಸಾಹಸಗಳಿಂದಾಗಿ ಸ್ಪೈಡರ್ ಮ್ಯಾನ್ ಎಂದೇ ಖ್ಯಾತರಾದ ರಾಬರ್ಟ್ ತಮ್ಮ ಈ ಹೊಸ ಸಾಹಸದ ಕಾರಣ ಟ್ರಬಲ್ ನಲ್ಲಿ ಸಿಲುಕಿದ್ದಾರೆ
ಅನುಮತಿ ಇಲ್ಲದೇ ಕಾರ್ಯಾಲಯದ ಕಟ್ಟಡವನ್ನೇರಿರುವುದನ್ನು ಪ್ರಶ್ನಿಸಿರುವ ಡಾಯಟ್ಶೆ-ಬಾಹ್ನ್ ಕ್ರಿಮಿನಲ್ ದೂರೊಂದನ್ನು ದಾಖಲಿಸಿದೆ. ತಮ್ಮ ಈ ಸಾಹಸವನ್ನು ವಿಡಿಯೋ ಮಾಡಿದ್ದ ರಾಬರ್ಟ್, ಕಂಪನಿಯ ಅನುಮತಿ ಪಡೆಯದೇ ಇರುವ ಕಾರಣ ದೊಡ್ಡ ಮಟ್ಟದ ದಂಡವನ್ನೂ ತೆರಬೇಕಾಗಿ ಬಂದಿದೆ. ಜರ್ಮನಿಗೆ ವಿದೇಶಿಗನಾದ ರಾಬರ್ಟ್, ಮುಂದಿನ ದಿನಗಳಲ್ಲಿ ಈ ರೀತಿಯ ಕೆಲಸಗಳನ್ನು ಮಾಡುವುದಿಲ್ಲ ಎಂದು ಭದ್ರತಾ ಠೇವಣಿಯನ್ನು ಪಾವತಿ ಮಾಡಬೇಕಿದೆ.