ಕೊರೋನಾ ವೈರಸ್ ಕಾರಣದಿಂದಾಗಿ ನಮ್ಮ ದೈನಂದಿನ ಬದುಕುಗಳಲ್ಲಿ ಸಾಕಷ್ಟು ಮಾರ್ಪಾಡುಗಳಾಗಿಬಿಟ್ಟಿವೆ. ಸಾಂಕ್ರಮಿಕದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಕೆಲವೊಮ್ಮೆ ಈ ಮಾರ್ಪಾಡುಗಳೇ ನಮಗೆ ಅಡಚಣೆಯಾಗಿಬಿಡುತ್ತಿವೆ.
ಕೋವಿಡ್-19 ಕಾರಣದಿಂದಾಗಿ ಹೆರಿಗೆಗೆ ಮುಂದಾಗಲಿರುವ ಮಹಿಳೆಯರೂ ಸಹ ಮುಖದ ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯವೆಂದು ಫ್ರಾನ್ಸ್ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಈ ನಿಯಮದಿಂದ ಹೆರಿಗೆಗೆ ಮುಂದಾಗಲಿರುವ ತಾಯಂದಿರಿಗೆ ಅಲ್ಪ ಸಡಿಲಿಕೆ ಕೊಡಲು ಫ್ರಾನ್ಸ್ ಸರ್ಕಾರ ನಿರ್ಧರಿಸಿದೆ.
ಈ ವಿಷಯವಾಗಿ ಸ್ಪಷ್ಟವಾದ ನಿರ್ಧಾರಕ್ಕೆ ಬರುವ ಮೂಲಕ ಹೆರಿಗೆ ನಿರೀಕ್ಷೆಯಲ್ಲಿರುವ ತಾಯಂದಿರಿಗೆ ಆಗುತ್ತಿರುವ ಕಿರಿಕಿರಿಯನ್ನು ತಡೆಗಟ್ಟಲು ಮೇಲ್ಕಂಡ ನಿಯಮವನ್ನು ಸಡಿಲಗೊಳಿಸಲು ಸಾಕಷ್ಟು ಗುಂಪುಗಳು ಸರ್ಕಾರ ಮೇಲೆ ಒತ್ತಡ ಹಾಕಿದ್ದವು.
ರಕ್ತದೊತ್ತಡ ಕುಸಿದ ಕಾರಣದಿಂದ ಸಿ-ಸೆಕ್ಷನ್ ವೇಳೆ ತನ್ನ ಮುಖದ ಮೇಲಿನ ಮಾಸ್ಕ್ ತೆಗೆದು ಹಾಕಿ ಆಕ್ಸಿಜನ್ ಮಾಸ್ಕ್ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ತಾಯಿಯೊಬ್ಬರು ದೂರಿದ ವಿಚಾರ ಡೇಲಿ ಮೇಲ್ ಪತ್ರಿಕೆಯಲ್ಲಿ ವರದಿಯಾಗಿತ್ತು.