ಉಪಕಾರ ಮಾಡಿದೋರಿಗೆ ಪರೋಪಕಾರ ಮಾಡೋದು ಮಾನವೀಯ ಮೌಲ್ಯಗಳಲ್ಲೊಂದು. ಅದರಲ್ಲೂ ನಮಗೆ ಬದುಕುವ ದಾರಿಯನ್ನ ಕಲಿಸಿದವರನ್ನ ಎಂದಿಗೂ ಮರೆಯಬಾರದು. ಶಿಕ್ಷಕರು ಕೂಡ ಇದೇ ಸಾಲಿನಲ್ಲಿ ಬರ್ತಾರೆ ಅನ್ನೋದನ್ನೂ ನಾವು ಮರೆಯುವಂತಿಲ್ಲ.
ಇದೇ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ 21 ವರ್ಷದ ಯುವಕನೊಬ್ಬ ತನ್ನ ಶಿಕ್ಷಕನಿಗೆ ಮಾಡಿದ ಸಹಾಯ ಕಂಡು ಸಾಮಾಜಿಕ ಜಾಲತಾಣ ಬಳಕೆದಾರರು ಹ್ಯಾಟ್ಸಾಪ್ ಎಂದಿದ್ದಾರೆ.
ಅಮೆರಿಕದಲ್ಲಿ ಕೋವಿಡ್ 19 ಬಿಕ್ಕಟ್ಟಿನಿಂದಾಗಿ ಸೂರಿಲ್ಲದೇ ತನ್ನ ಕಾರಿನಲ್ಲೇ ವಾಸಿಸುತ್ತಿದ್ದ ಮಿಸ್ಟರ್ ವಿ ಎಂದೇ ಪರಿಚಿತರಾದ ಶಿಕ್ಷಕ ಜಾಸ್ ವಿಲ್ಲಾರ್ರುಲ್ ಎಂಬವರಿಗೆ ಮಾಜಿ ವಿದ್ಯಾರ್ಥಿಯೊಬ್ಬ ಬರೋಬ್ಬರಿ 19 ಲಕ್ಷ ರೂಪಾಯಿಗಳ ಚೆಕ್ನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.
77 ವರ್ಷದ ಜಾಸ್, ಅನೇಕ ದಶಕಗಳಿಂದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠವನ್ನ ಮಾಡುತ್ತಿದ್ದರು. ಆದರೆ ಇದೀಗ ಮನೆಯೂ ಇಲ್ಲದೇ ಕಾರಿನಲ್ಲಿ ವಾಸವಿದ್ದ ಶಿಕ್ಷಕನ ದುಸ್ಥಿತಿ ಕಂಡ ಮಾಜಿ ವಿದ್ಯಾರ್ಥಿ ಸ್ಟೀವನ್ ನಾವಾ ಎಂಬಾತ ಆನ್ಲೈನ್ ಅಭಿಯಾನದ ಮೂಲಕ ಹಣ ಸಂಗ್ರಹಿಸಿ ತನ್ನ ಶಿಕ್ಷಕನಿಗೆ ಈ ಸಹಾಯ ಮಾಡಿದ್ದಾನೆ.
ಜಾಸ್ ತಮ್ಮ ಶಿಕ್ಷಕ ವೃತ್ತಿ ಮೂಲಕ ಅಪಾರ ವಿದ್ಯಾರ್ಥಿಗಳ ಪ್ರೀತಿಯನ್ನ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕೊರೊನಾ ಸಂಕಷ್ಟದಿಂದಾಗಿ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಲೇಬೇಕಾದ ಅನಿವಾರ್ಯತೆ ಎದುರಾಯ್ತು. ಶಾಲೆಗ ರಾಜೀನಾಮೆ ನೀಡಿದ ಬಳಿಕ ಸಿಕ್ಕ ಹಣ ಸಾಲದ ಕಾರಣ ಈ ಶಿಕ್ಷಕ ಕಾರಿನಲ್ಲೇ ಉಳಿದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.