ಭಾರತೀಯರೂ ಸೇರಿದಂತೆ ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ವಿದೇಶಿ ವಿದ್ಯಾರ್ಥಿಗಳಿಗೆ ಡೋನಾಲ್ಡ್ ಟ್ರಂಪ್ ಸರ್ಕಾರ ದೊಡ್ಡ ಶಾಕ್ ನೀಡಿದೆ. ಆನ್ಲೈನ್ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾದ ಬಳಿಕ ದೇಶ ತೊರೆಯುವಂತೆ ಸೂಚನೆ ನೀಡಲಾಗಿದ್ದು, ಇದರಿಂದಾಗಿ ವಿದ್ಯಾರ್ಥಿಗಳಿಗೆ ಅತಂತ್ರರಾಗುವ ಭೀತಿ ಎದುರಾಗಿದೆ.
ದೇಶವಾಸಿಗಳಿಗೆ ಮೊದಲ ಆದ್ಯತೆ ಎಂಬ ಮಂತ್ರವನ್ನು ಪಠಿಸುತ್ತಲೇ ಬಂದಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗಾಗಲೇ ಉದ್ಯೋಗ ನಿಮಿತ್ತ ನೀಡಲಾಗುವ ಎಚ್-1ಬಿ ವೀಸಾ ಮೇಲೆ ಹಲವು ನಿಬಂಧನೆಗಳನ್ನು ವಿಧಿಸಿದ್ದಾರೆ. ಇದೀಗ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ನೀಡಲಾಗುವ F-1 ಅಥವಾ M-1 ವೀಸಾದಾರರಿಗೆ ವಾಪಾಸ್ ತಮ್ಮ ದೇಶಗಳಿಗೆ ಕಳುಹಿಸಿಕೊಡಲು ಮುಂದಾಗಿದ್ದಾರೆ.
ಅಮೆರಿಕಾದಲ್ಲಿ ಚೀನಾ ನಂತರ ಭಾರತೀಯ ವಿದ್ಯಾರ್ಥಿಗಳೇ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, 2017 ಹಾಗೂ 2018 ರ ಅವಧಿಯಲ್ಲಿ ಒಟ್ಟು 2,51,290 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗಿದೆ. ಮೊದಲ ಸ್ಥಾನದಲ್ಲಿರುವ ಚೀನಾದ 4,78,732 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಂತರದ ಸ್ಥಾನಗಳಲ್ಲಿ ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ ಹಾಗೂ ಕೆನಡಾ ದೇಶಗಳ ವಿದ್ಯಾರ್ಥಿಗಳಿದ್ದಾರೆ.
ವಿದ್ಯಾರ್ಥಿಗಳಿಂದಲೇ 2018ರಲ್ಲಿ ಅಮೆರಿಕಾಗೆ 44.7 ಬಿಲಿಯನ್ ಡಾಲರ್ ಆದಾಯ ಹರಿದುಬಂದಿದೆ. ಆದರೆ ಈಗ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಟ್ರಂಪ್ ಸರ್ಕಾರ ಇಂತಹ ತೀರ್ಮಾನ ಕೈಗೊಳ್ಳಲು ಹೊರಟಿರುವುದಕ್ಕೆ ವಿವಿಧ ವಲಯಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಆನ್ಲೈನ್ ಕ್ಲಾಸ್ ನಡೆಯುತ್ತಿದೆಯಾದರೂ ಪ್ರಾಯೋಗಿಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಅನಿವಾರ್ಯವಾಗಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ಕಳುಹಿಸುವುದು ಸೂಕ್ತವಲ್ಲ ಎಂದು ಹೇಳಲಾಗುತ್ತಿದೆ.
ಅಲ್ಲದೆ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಅಂತರಾಷ್ಟ್ರೀಯ ವಿಮಾನ ಸಂಚಾರ ಸಂಪೂರ್ಣ ರದ್ದಾಗಿದ್ದು, ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಾಪಸ್ ತಮ್ಮ ದೇಶಗಳಿಗೆ ತೆರಳುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಒಂದೊಮ್ಮೆ ಮರಳಿ ಬಂದರೂ ಸಹ ಮುಂದಿನ ಶಿಕ್ಷಣದ ಕಥೆಯೇನು ಎಂಬ ಮಾತು ಕೇಳಿಬರುತ್ತಿದೆ. ಒಟ್ಟಿನಲ್ಲಿ ಕೊರೊನಾ ಸಂಕಷ್ಟದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ತೆಗೆದುಕೊಳ್ಳುತ್ತಿರುವ ಕೆಲವು ನಿರ್ಧಾರಗಳು ಅಮೆರಿಕದಲ್ಲಿರುವ ವಿದೇಶಿಗರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.