ಬೀಜಿಂಗ್: ದಕ್ಷಿಣ ಚೀನಾದ ಯಾಂಗ್ಟಜ್ ನದಿಯಲ್ಲಿ ಉಂಟಾದ ಪ್ರವಾಹ ಅತಿ ಎತ್ತರದ ಪ್ರಸಿದ್ಧ ಬುದ್ಧ ಪ್ರತಿಮೆಯವರೆಗೂ ತಲುಪಿದೆ. ಇತ್ತೀಚಿನ ದಶಕಗಳಲ್ಲಿ ಇದೇ ಮೊದಲ ಬಾರಿಗೆ ಬುದ್ಧ ಪ್ರತಿಮೆಯವರೆಗೂ ನೀರು ಹತ್ತಿದೆ.
ಚೀನಾದ ಸಿಂಚುನ್ ಪ್ರಾಂತ್ಯದಲ್ಲಿ 1200 ವರ್ಷಗಳ ಹಿಂದೆ ಬೆಟ್ಟದ ಕಲ್ಲಿನಲ್ಲಿ ಕೆತ್ತಿದ ಕುಳಿತ ಬುದ್ಧನ ಪ್ರತಿಮೆ 70 ಮೀಟರ್ ಎತ್ತರವಿದೆ. ಈ ತಾಣ ಯುನೆಸ್ಕೊದ ವರ್ಲ್ಡ್ ಹೆರಿಟೇಜ್ ಸೈಟ್ ಪಟ್ಟಿಗೆ ಸೇರಿದೆ.
ಯಾಂಗ್ಟಜ್ ವಿಶ್ವದ ಅತಿ ಉದ್ದದ ನದಿಯಾಗಿದೆ. ಪ್ರವಾಹದ ಕಾರಣ ನದಿ ಪಾತ್ರದ ಬುದ್ಧ ಪ್ರತಿಮೆಯ ತಳ ರಕ್ಷಣೆಗಾಗಿ ಪೊಲೀಸರು ಮರಳಿನ ಚೀಲಗಳನ್ನು ಹಾಕಿದ್ದರು. ಆದರೆ, ಸೋಮವಾರ ಬೆಳಗಿನ ಹೊತ್ತಿಗೆ ನೀರು ಪ್ರತಿಮೆಯ ಕಾಲಬೆರಳನ್ನು ಮುಟ್ಟಿತ್ತು. ಕಳೆದ 70 ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ನೀರು ಬಂದಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಆ ಭಾಗದಿಂದ ಸಾವಿರಾರು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.