ನೀರ ಮೇಲೆ ಗಿಡ, ಮರ ಬೆಳೆಯುವುದು ಸಾಧ್ಯವೇ? ಸಂಶಯ ಬರುವುದು ಅಷ್ಟೇ ಸಹಜ. ಆದರೆ ಶ್ರದ್ಧೆ, ಬದ್ಧತೆ, ಪ್ರಾಮಾಣಿಕತೆ ಇದ್ದರೆ ಏನು ಬೇಕಾದರೂ ಮಾಡಬಹುದು, ಯಶಸ್ಸು ಸಾಧಿಸಬಹುದು ಅನ್ನುವುದಕ್ಕೆ ಹಾಲೆಂಡ್ ದೇಶದ ಈ ಫ್ಲೋಟಿಂಗ್ ಫಾರೆಸ್ಟ್ ಸಾಕ್ಷಿ.
ಹಾಲೆಂಡ್ ಬಳಿಯ ರೋಟರ್ ಡ್ಯಾಮ್ ನಗರದಲ್ಲಿ ನೀರ ಮೇಲೆ ಪುಟ್ಟ ಅರಣ್ಯ ಕಾಣಬಹುದು. ಈ ನಗರವನ್ನು ಆಧುನೀಕರಿಸಲು ಅನೇಕ ಗಿಡಮರಗಳನ್ನು ತೆಗೆಯುವ ಪ್ರಸಂಗ ಬಂತು. ಗ್ಲೋಬಲ್ ವಾರ್ಮಿಂಗ್ ಅಧಿಕವಾಗಿರುವುದರಿಂದ ತೆಗೆದ ಗಿಡಗಳನ್ನು ಸಾಗರದಲ್ಲಿ ಬೆಳೆಸಿದರೆ ಹೇಗೆ ಎಂಬ ಆಲೋಚನೆ ಹೊಳೆದದ್ದೇ ತಡ, ಅದನ್ನು ಕಾರ್ಯಗತಗೊಳಿಸಲು ಮುಂದಾಯಿತು ಅಲ್ಲಿನ ಸರ್ಕಾರ.
ಗಿಡಮರಗಳನ್ನು ಬೆಳೆಸಲು ನೆಲವೇ ಅಗತ್ಯವಿಲ್ಲವೆಂದು ನಿರೂಪಿಸಿದೆ ನೀರ ಮೇಲೆ ಬೆಳೆದ ಈ ಗಿಡಗಳು. ನೆಲದ ಮೇಲೆ ಗಿಡ ಬೆಳೆಸಲು ಹಿಂಜರಿಯುವ ನಮಗೆ ಇದೊಂದು ಮಾದರಿ ಯೋಜನೆಯೇ ಸರಿ. ಮುಖ್ಯವಾಗಿ ಪರಿಸರ ಸಂರಕ್ಷಿಸಬೇಕೆಂಬ ಬಯಕೆ ಬಲವಾಗಿ ಇರಬೇಕು ಅನ್ನುವುದನ್ನು ಇಲ್ಲಿನ ಸರ್ಕಾರ ತೋರಿಸಿ ಕೊಟ್ಟಿದೆ.
ಸಮುದ್ರದ ಉಪ್ಪು ನೀರಿನಿಂದ ಸಸಿ ಬೆಳೆಯದು. ಹಾಗಾಗಿ ಸುಮಾರು 500 ಲೀಟರ್ ಸಾಮರ್ಥ್ಯ ಇರುವ ನೀರಿನ ಟ್ಯಾಂಕ್ ಗಳನ್ನು ಇದಕ್ಕಾಗಿ ತಯಾರಿಸಿ ಅವು ನೀರಲ್ಲಿ ಮುಳುಗದಂತೆ ನವೀನ ತಂತ್ರಜ್ಞಾನ ಬಳಸಿ ಸ್ಥಾಪಿಸಲಾಗಿದೆ. ಕ್ರೇನ್ ಮೂಲಕ ಸಮುದ್ರದ ಮೇಲೆಯೇ ವರ್ಷಕ್ಕೆ ನಾಲ್ಕು ಸಲ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ.
ಹಸಿರು ತುಂಬಿದ ಈ ಸಮುದ್ರ ಕಾರ್ಬನ್ ಡೈ ಆಕ್ಸೈಡ್ ಹೀರಿ, ಆಮ್ಲಜನಕ ನೀಡಿ ಜನರ ಆರೋಗ್ಯ ಕಾಪಾಡುವುದರಲ್ಲಿ ಸಂದೇಹವಿಲ್ಲ.