ಟೆಕ್ಸಾಸ್: ಇದ್ದ ಇಬ್ಬರು ಮಕ್ಕಳ ಉಪಟಳವನ್ನೇ ತಡೆದುಕೊಳ್ಳುವುದು ಕಷ್ಟ ಎಂದು ಗೋಳು ಹೇಳಿಕೊಳ್ಳುವ ಎಷ್ಟೋ ದಂಪತಿಗಳಿದ್ದಾರೆ. ಆದರೆ, ಅಮೆರಿಕದ ಟೆಕ್ಸಾಸ್ ನ ಈ ಜೋಡಿಗೆ ಸ್ವಂತ ಮೂರು ಮಕ್ಕಳಿದ್ದರೂ ಸಮಾಧಾನವಿಲ್ಲ. ಇನ್ನೂ ಐದು ಒಡಹುಟ್ಟಿದ ಮಕ್ಕಳನ್ನು ದತ್ತು ಪಡೆದಿದ್ದಾರೆ.
ಆ್ಯಂಡಿ ಮತ್ತ ಥಾಮಸ್ ದಂಪತಿ ಜು. 6 ರಂದು, ನಾಲ್ವರು ಗಂಡು ಹಾಗೂ ಒಬ್ಬ ಹೆಣ್ಣು ಮಗುವನ್ನು ಅಧಿಕೃತವಾಗಿ ದತ್ತು ಪಡೆದರು. ದಂಪತಿಗೆ ಜನಿಸಿದ ಹಿರಿಯ ಮಗ ಜಾಯ್ ಪಾರ್ಶ್ವವಾಯುವಿಗೆ ತುತ್ತಾದ. ಆತನ ಜತೆಯೇ ಜನಿಸಿದ್ದ ಅವಳಿ ಸಹೋದರ ಎಲಿ ಮೃತಪಟ್ಟಿದ್ದ. ಇದರಿಂದ ಇಬ್ಬರೂ ಸಾಕಷ್ಟು ನೊಂದುಕೊಂಡಿದ್ದರು. ನಂತರ ಸ್ಯಾಂಡಿ ಮತ್ತು ಡಂಪೇನ್ ಎಂಬ ಹೆಣ್ಣು ಮಕ್ಕಳು ಜನಿಸಿದ್ದರು. ಆದರೂ ಆ್ಯಂಡಿ ಮತ್ತು ಥಾಮಸ್ ಗೆ ಸಮಾಧಾನ ಇರಲಿಲ್ಲ ಇನ್ನೊಂದು ಮಗು ಪಡೆಯುವ ಇಚ್ಛೆ ಹೊಂದಿದ್ದರು. ಆದರೆ, ವಯಸ್ಸಿನ ಕಾರಣಕ್ಕೆ ಅದು ಅಪಾಯ ಎಂದುಕೊಂಡು ದತ್ತು ಪಡೆಯಲು ಮುಂದಾಗಿದ್ದರು. 2017 ರ ನವೆಂಬರ್ ನಲ್ಲಿ ಬ್ರೇಯ್ಸನ್ ಎಂಬ ಬಾಲಕನನ್ನು ದತ್ತು ಪಡೆದಿದ್ದರು.
ಬ್ರೇಯ್ಸನ್ ಮನೆ ಸೇರಿದ ನಂತರ ಬಾಲಕನ ಇನ್ನೂ ಮೂವರು ಸಹೋದರರು ಮತ್ತು ಒಬ್ಬ ಸಹೋದರಿ ಬೇರೆಯಾಗುವಂತಾಗಿತ್ತು. ಬೇರೆ, ಬೇರೆ ದತ್ತು ಮನೆಗಳಲ್ಲಿ ಬೆಳೆಯುವಂತಾಗಿತ್ತು. ಇದರಿಂದ ಬೇಸರಗೊಂಡ ಥಾಮಸ್ ದಂಪತಿ ಎಲ್ಲರನ್ನೂ ಹುಡುಕಿ ಸ್ವತಃ ದತ್ತು ಪಡೆದಿದ್ದಾರೆ. ತಮ್ಮದೀಗ ತುಂಬು ಕುಟುಂಬ ಎಂದು ಖುಷಿಪಡುತ್ತಿದ್ದಾರೆ.