ಇಂಗ್ಲೆಂಡ್ನ ಕೌಂಟಿಯಾದ ಕಾರ್ನ್ವಾಲ್ನಲ್ಲಿ ಮೀನುಗಾರರೊಬ್ಬರು ಅಪರೂಪದ ನೀಲಿ ಬಣ್ಣದ ಕಡಲ ಏಡಿಯನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 25 ವರ್ಷದ ಲ್ಯಾಂಬೋರ್ನ್ ಎಂಬುವವರ ಬಲೆಗೆ ಈ ಅಪರೂಪದ ಏಡಿ ಬಂದು ಬಿದ್ದಿದೆ.
ಇದು ಗಾತ್ರದಲ್ಲಿ ತುಂಬಾನೇ ಚಿಕ್ಕದಾಗಿದ್ದರಿಂದ ಅದರ ಕೆಲವು ಫೋಟೋಗಳನ್ನ ಕ್ಲಿಕ್ಕಿಸಿಕೊಂಡ ಲ್ಯಾಂಬೋರ್ನ್ ಬಳಿಕ ಅದನ್ನ ಸುರಕ್ಷಿತವಾಗಿ ಸಮುದ್ರಕ್ಕೆ ಎಸೆದಿದ್ದಾರೆ.
ನಾನು ಈ ಬಣ್ಣದ ಕಡಲೇಡಿಯನ್ನ ಈ ಹಿಂದೆ ಎಲ್ಲಿಯೂ ನೋಡೇ ಇರಲಿಲ್ಲ. ನನ್ನನ್ನ ನಾನು ಅದೃಷ್ಟವಂತ ಎಂದು ಭಾವಿಸಿಕೊಂಡಿದ್ದು ಇದು ಎರಡನೇ ಬಾರಿ. ಇದರ ಗಾತ್ರ ತುಂಬಾನೇ ಚಿಕ್ಕದಾಗಿದ್ದರಿಂದ ನಾನು ಅದನ್ನ ನನ್ನ ಬಳಿ ಇರಿಸಿಕೊಳ್ಳೋದು ಸೂಕ್ತವಲ್ಲ ಎಂದು ನಿರ್ಧರಿಸಿದೆ. ಒಂದು ವೇಳೆ ಕಡಲೇಡಿ ಗಾತ್ರದಲ್ಲಿ ದೊಡ್ಡದಾಗಿದ್ದರೆ ನಾನು ಅದನ್ನ ಕೂಡಲೇ ರಾಷ್ಟ್ರೀಯ ಹ್ಯಾಚರಿಗೆ ಕೊಂಡೊಯ್ಯುತ್ತಿದ್ದೆ ಎಂದು ಲ್ಯಾಂಬೋರ್ನ್ ಹೇಳಿದ್ರು.
ನಾನು ಇದರ ಕೆಲ ಫೋಟೋಗಳನ್ನ ತೆಗೆದುಕೊಂಡೆ. ಇದರ ಫೋಟೋವನ್ನ ನೋಡಿದ ರಾಷ್ಟ್ರೀಯ ಕಡಲೇಡಿ ಮೊಟ್ಟೆ ಕೇಂದ್ರದ ಸಿಬ್ಬಂದಿ ಇದು 2 ಮಿಲಿಯನ್ ಜಲಚರಗಳಲ್ಲಿ ಒಂದು ಕಾಣಸಿಗುತ್ತೆ ಎಂದು ಹೇಳಿದ್ರು. ಹಾಗಾಗಿ ಇದೊಂದು ವಿಶೇಷವಾದ ಕಡಲೇಡಿ ಅನ್ನೋದು ನನಗೆ ತಿಳಿಯಿತು ಎಂದು ಹೇಳಿದ್ರು.
ಇನ್ನು ಈ ವಿಚಾರವಾಗಿ ಮಾತನಾಡಿ ಹ್ಯಾಚರಿ ವಕ್ತಾರ, ಈ ಬಣ್ಣದ ಕಡಲೇಡಿಗಳು ಕಾಣಸಿಗೋದು ಅತಿ ವಿರಳ. ಬಹುಶಃ 2 ಮಿಲಿಯನ್ ಜೀವಚರಗಳಲ್ಲಿ ಇಂತಹ ಅಪರೂಪದ ಕಡಲೇಡಿಗಳು ಕಾಣಬಹುದು. ಲ್ಯಾಂಬೋರ್ನ್ ಈ ವಿಶೇಷ ಕಡಲೇಡಿಯ ಫೋಟೋವನ್ನ ಕಳುಹಿಸಿದ್ರು. ಆದರೆ ಅದು ತುಂಬಾ ಚಿಕ್ಕದಾಗಿದ್ದರಿಂದ ಅದನ್ನು ವಾಪಾಸ್ ಸಮುದ್ರಕ್ಕೆ ಬಿಡಲು ಹೇಳಿದೆವು. ಯಾರಿಗೊತ್ತು ಈ ಕಡಲೇಡಿ ಮುಂದೆ ದೊಡ್ಡದಾದ ಮೇಲೆ ಇನ್ನೂ ಆಕರ್ಷಕವಾಗಿ ಕಾಣಬಹುದು ಎಂದು ಹೇಳಿದ್ರು.