ಬೀಜಿಂಗ್: ನದಿಯೊಳಗೆ ನೆಲದಡಿಯ ಸುರಂಗವೊಂದರಲ್ಲಿ ಸಿಲುಕಿಕೊಂಡಿದ್ದ ಬಾಲಕನನ್ನು ಅಗ್ನಿಶಾಮಕ ಸಿಬ್ಬಂದಿಯೊಬ್ಬ ಪವಾಡ ಸದೃಶ ರೀತಿಯಲ್ಲಿ ರಕ್ಷಣೆ ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ. ಜೆಜಿಂಗ್ ಪ್ರಾಂತ್ಯದ ಯೊಂಗ್ ಜಿಯಾ ಕೌಂಟಿಯ ನದಿಯಲ್ಲಿ ಜುಲೈ 22 ರಂದು ಈಜುವಾಗ 7 ವರ್ಷದ ಬಾಲಕ ಸುರಂಗದಡಿ ಸಿಲುಕಿಕೊಂಡಿದ್ದ.
ಅಜ್ಜನ ಜತೆ ಆಗಮಿಸಿ ಈಜುತ್ತಿದ್ದ ಬಾಲಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಹುಡುಕಿದಾಗ ಸಣ್ಣ ರಂಧ್ರದಿಂದ ಕೈ ಹೊರ ಬರುತ್ತಿರುವುದು ಕಾಣಿಸಿದೆ. ತಕ್ಷಣ ಸ್ಥಳದಲ್ಲಿದ್ದವರು ಅಗ್ನಿಶಾಮಕ ದಳಕ್ಕೆ ಫೋನ್ ಮಾಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬ ಸ್ಥಳಕ್ಕೆ ಆಗಮಿಸಿ 10 ನಿಮಿಷದಲ್ಲಿ ಬಾಲಕನನ್ನು ರಕ್ಷಿಸಿದ್ದಾರೆ.
ನಂತರ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಸ್ಥಳೀಯ ಆಡಳಿತ ಬಿಡುಗಡೆ ಮಾಡಿದೆ. ಒಬ್ಬ ಬಾಲಕನ ಕೈ ಹಿಡಿದುಕೊಂಡಿದ್ದರೆ, ಫೈರ್ ಫೈಟರ್ ರಂಧ್ರ ಕೊರೆದು ಬಾಲಕನನ್ನು ಹೊರ ತಂದಿದ್ದ. ನದಿಯ ನೀರು ಹರಿಸಲು ನೆಲದಡಿ ಮಾಡಿದ್ದ ಕಾಲುವೆ ಮುಚ್ಚದ ಕಾರಣ ಸುರಂಗ ನಿರ್ಮಾಣವಾಗಿತ್ತು. ಘಟನೆಯ ನಂತರ ಆಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಅದನ್ನು ಮುಚ್ಚಿದೆ.