ವಾಷಿಂಗ್ಟನ್: ಬಾಹ್ಯಾಕಾಶ ನಿಲ್ದಾಣಕ್ಕೆ ಮಾನವ ತೆರಳಲು ಪ್ರಾರಂಭಿಸಿ ಕಳೆದ ನವೆಂಬರ್ ಗೆ 20 ವರ್ಷ ಕಳೆದಿದೆ. ಅಲ್ಲಿ ವಾಸಿಸುವವರ ಆರೋಗ್ಯ ಹಾಗೂ ಸುರಕ್ಷತೆಗಾಗಿ ಹಲವು ಹೊಸ ತಂತ್ರಜ್ಞಾನಗಳನ್ನು ಇತ್ತೀಚೆಗೆ ಪರಿಚಯಿಸಲಾಗುತ್ತಿದೆ.
ಸುಖ ನಿದ್ರೆಗಾಗಿ ಎಲ್.ಇ.ಡಿ.ತಂತ್ರಜ್ಞಾನ ಅಳವಡಿಸಲಾಗಿದೆ. ಶೂನ್ಯ ಗುರುತ್ವಾಕರ್ಷಣೆಯಲ್ಲಿ ಗಗನಯಾನಿಗಳ ದೇಹ ಸದೃಢತೆಗಾಗಿ ವೇಟ್ ಲಿಫ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ತ್ಯಾಜ್ಯ ನೀರನ್ನು ಸಂಪೂರ್ಣ ಸದ್ಬಳಕೆ ಮಾಡಲು ಮತ್ತೊಂದು ಹೊಸ ತಂತ್ರಜ್ಞಾನ ಪರಿಚಯಿಸಲಾಗಿದೆ.
ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರತಿ ಹನಿ ನೀರೂ ಅತಿ ಮುಖ್ಯ ಇದುವರೆಗೆ ಇದ್ದ ನೀರಿನ ಶುದ್ದೀಕರಣ ಯಂತ್ರ ನೀರನ್ನು ಸಾಕಷ್ಟು ಶುದ್ಧ ಮಾಡುತ್ತಿರಲಿಲ್ಲ. ಕಲ್ಮಶಗಳು ಉಳಿಯುತ್ತಿದ್ದವು. ಪ್ರತಿ 90 ದಿನಕ್ಕೆ ಅದನ್ನು ಬದಲಾಯಿಸಬೇಕಿತ್ತು. ಆದರೆ, ಈಗ ಹೊಸ ಯಂತ್ರ ಅಳವಡಿಸಲಾಗುತ್ತಿದೆ. ಅದು ನೀರನ್ನು ಶೇ.95 ರಷ್ಟು ಶುದ್ಧ ಮಾಡಲಿದೆ.
ಅಕ್ವಾಫೋರಿನ್ A/S ಎಂಬ ಡ್ಯಾನಿಷ್ ಕಂಪನಿ ಮೂತ್ರ, ಹಾಗೂ ಇತರ ತ್ಯಾಜ್ಯ ನೀರು ಶುದ್ಧೀಕರಣಕ್ಕೆ ಹೊಸ ಯಂತ್ರ ಸಿದ್ದ ಮಾಡಿದೆ. ಮಾನವನ ದೇಹದಲ್ಲಿರುವ ಮೂತ್ರ ಕೋಶವು ಹೇಗೆ ಪ್ರೋಟೀನ್ ಮೂಲಕ ಶೋಧ ಕಾರ್ಯ ಮಾಡುತ್ತದೆಯೋ ಅದೇ ಮಾದರಿಯಲ್ಲಿ ಹೊಸ ಯಂತ್ರವೂ ನೀರು ಶುದ್ಧೀಕರಣ ಮಾಡಲಿದೆ. ಕಂಪನಿ ಅಮೆರಿಕಾ, ಯೂರೋಪ್ ಸೇರಿ ಇತರ ದೇಶದಲ್ಲಿಯೂ ಜನರಿಗೆ ಈ ತಂತ್ರಜ್ಞಾನ ಬಳಸಿ ನೀರು ಶುದ್ಧೀಕರಣ ಯಂತ್ರ ಅಳವಡಿಸಲು ಸಿದ್ಧತೆ ನಡೆಸಿದೆ.