ಅದೊಂದು ಕಾಲವಿತ್ತು. ಇಂಟರ್ನೆಟ್, ಮೊಬೈಲ್, ಫೋನ್, ಪೇಜರ್ ಇತ್ಯಾದಿ ತಂತು ಅಥವಾ ನಿಸ್ತಂತು ಸೇವೆಗಳಿಲ್ಲದ ಕಾಲವದು.
ಹಾಗೆಂದು ಪರಸ್ಪರ ಸಂವಹನಗಳು ನಡೆಯುತ್ತಿರಲಿಲ್ಲವೇ ? ಈಗಿನದಕ್ಕಿಂತ ಚೆನ್ನಾಗಿಯೇ ನಡೆಯುತ್ತಿತ್ತು.
ಪತ್ರ, ಅಂಚೆ, ಓಲೆಗರಿಗಳನ್ನು ಪಾರಿವಾಳ ಇತ್ಯಾದಿ ಪಕ್ಷಿಗಳ ಮೂಲಕ ಮೇಘ ಸಂದೇಶ ರವಾನಿಸಲಾಗುತ್ತಿತ್ತು. ಅದಕ್ಕೂ ಹಿಂದೆ ಸಂದೇಶ ಬರೆದ ಗಿಡ-ಮರಗಳ ಎಲೆಯನ್ನು ಹರಿಯುವ ನೀರಿನಲ್ಲಿ ತೇಲಿ ಬಿಡುವ ಕಾಲವೂ ಇತ್ತಂತೆ. ಹಲವು ಸಿನಿಮಾಗಳಲ್ಲಿ ಈ ತಾಂತ್ರಿಕತೆ ಬಳಸಲಾಗಿದೆ ಕೂಡ.
ಆದರೆ, ಈ ಪ್ರಯೋಗವೀಗ ದೂರದ ನ್ಯೂಯಾರ್ಕ್ ನಗರದಲ್ಲಿ ಎರಡು ಪುಟ್ಟ ಸ್ನೇಹಿತರ ನಡುವೆ ನಡೆದಿದೆ.
ಹನ್ನೊಂದು ವರ್ಷಗಳ ಸಾರಾಹ್ ಬೆತ್ – ಸೋಫಿಯಾ ವಿಲ್ಸನ್ ನ್ಯೂಯಾರ್ಕ್ ನ ಗೆಳತಿಯರು. ರಜೆಗೆಂದು ಫ್ಲೋರಿಡಾಗೆ ತೆರಳಿದ ಸೋಫಿಯಾ, ಸಾರಾಹ್ ಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಳು. ಈಗ ಲಾಕ್ ಡೌನ್ ಪರಿಣಾಮದಿಂದ ಪರಸ್ಪರ ಭೇಟಿಯೂ ಸಾಧ್ಯವಾಗಿಲ್ಲ. ದಿನವೂ ಎದುರಿಗೆ ಸಿಕ್ಕು ಮಾತನಾಡುತ್ತಿದ್ದ ಇಬ್ಬರೂ ಪರಸ್ಪರ ಫೋನ್ ನಂಬರ್ ಗಳ ವಿನಿನಯ ಮಾಡಿಕೊಂಡೇ ಇರಲಿಲ್ಲ. ಇಬ್ಬರೂ ಹೀಗೆ ತಿಂಗಳುಗಟ್ಟಲೇ ದೂರಾಗುವುದನ್ನು ಎಣಿಸಿರಲಿಲ್ಲ.
ಈಗ ಸಂಪರ್ಕಿಸುವುದಾದರೂ ಹೇಗೆ ಎಂದು ಯೋಚಿಸಿದಾಗ, ಬಾಟಲ್ ಒಂದರೊಳಗೆ ಪತ್ರ ಬರೆದಿಟ್ಟು ಸಮುದ್ರದಲ್ಲಿ ತೇಲಿ ಬಿಟ್ಟಿದ್ದಾಳೆ. ಬರೋಬ್ಬರಿ 1000 ಕಿ.ಮೀ. ನಷ್ಟು ದೂರ ಅಲೆಗಳ ಮೇಲೆ ಸಾಗಿದ ಸಂದೇಶ ಹೊತ್ತ ಬಾಟಲ್ ಉತ್ತರ ಕೆರೋಲಿನಾದ ಹೋಲ್ಡನ್ ತೀರಪ್ರದೇಶ ಸೇರಿದೆ. ಗೆಳತಿಯನ್ನೂ ತಲುಪಿದೆ, ಈಕೆಯ ಫೋನ್ ನಂಬರ್ ಆಕೆಗೆ ಸಿಕ್ಕಿದೆ. ಈಗ ಇಬ್ಬರೂ ಫೋನ್ ನಲ್ಲಿ ಹರಟೆ ಹೊಡೆಯುತ್ತಿದ್ದಾರೆ. ಇದನ್ನು ಸ್ಥಳೀಯ ಸುದ್ದಿವಾಹಿನಿಗಳು, ಮೊಟ್ಟಮೊದಲ ಸಮುದ್ರ ಸಂದೇಶ ಎಂದು ಬಣ್ಣಿಸಿವೆ.