ಗೌಪ್ಯತೆಯ ಸಂಪೂರ್ಣ ಉಲ್ಲಂಘನೆಯಾಗಿ ಸಾವಿರಾರು ಮಹಿಳೆಯರ ನಕಲಿ ಬೆತ್ತಲೆ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಟೆಲಿಗ್ರಾಮ್ ನಲ್ಲಿ ರಚಿಸಿ ಶೇರ್ ಮಾಡಲಾಗುತ್ತಿದೆ.
ಒಪ್ಪಿಗೆಯಿಲ್ಲದೆ ಆನ್ಲೈನ್ ಮೂಲಕ ಮಹಿಳೆಯರ ನಕಲಿ ಬೆತ್ತಲೆ ಫೋಟೋಗಳನ್ನು ಹರಿಬಿಡಲಾಗುತ್ತಿದೆ. ‘ಬುಜ್ ಫೀಡ್’ ವರದಿಯ ಪ್ರಕಾರ, ಟೆಲಿಗ್ರಾಮ್ ಹೊಸದಾಗಿ ಪರಿಚಯಿಸಿದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬೋಟ್ ಮೂಲಕ ಮಹಿಳೆಯರ ನಕಲಿ ನಗ್ನ ಚಿತ್ರಗಳನ್ನು ರಚಿಸಲಾಗುತ್ತಿದೆ. ಮಹಿಳೆಯರ ಫೋಟೋಗಳನ್ನು ಈ ರೀತಿ ರಚಿಸಿ ಹರಿಬಿಡಲಾಗುತ್ತಿದೆ.
ಬಳಕೆದಾರರಿಗೆ ಡಿಸ್ ಫೇಕ್, ಕಂಪ್ಯೂಟರ್ ರಚಿತ ಚಿತ್ರವನ್ನು ರಚಿಸಲು ಅನುಮತಿಸುತ್ತದೆ. ಇದರಲ್ಲಿ ಕೃತಕ ಬುದ್ಧಿಮತ್ತೆಯಿಂದ ಡಿಜಿಟಲ್ ರೂಪದಲ್ಲಿ ಮಹಿಳೆಯರ ಬಟ್ಟೆಗಳನ್ನು ತೆಗೆದುಹಾಕಲಾಗುತ್ತದೆ. ಗೊಂದಲದ ಸಂಗತಿಯೆಂದರೆ ಬಳಕೆದಾರರು ಬೋಟ್ ಮೂಲಕ ಮಹಿಳೆಯರ ಫೋಟೋ ಕಳುಹಿಸಬಹುದು. ಅದು ಕೆಲ ನಿಮಿಷದಲ್ಲಿ ಡಿಜಿಟಲ್ ಮೂಲಕ ಬಟ್ಟೆಯನ್ನು ತೆಗೆದುಹಾಕುತ್ತದೆ ಎನ್ನಲಾಗಿದೆ.
ಬೋಟ್ ಸ್ಮಾರ್ಟ್ಫೋನ್ ಮತ್ತು ಕಂಪ್ಯೂಟರ್ಗಳಲ್ಲಿ ಬಳಸಲು ಉಚಿತವಾಗಿದ್ದು ಟೆಲಿಗ್ರಾಂ ಮೂಲಕ ಸುಲಭವಾಗಿ ಪ್ರವೇಶಿಸಬಹುದು. ಆಮ್ ಸ್ಟರ್ ಡ್ಯಾಂ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ದೃಶ್ಯ ಬೆದರಿಕೆ ಗುಪ್ತಚರ ಕಂಪನಿ ‘ಸೆನ್ಸಿಟಿ’ ಟೆಲಿಗ್ರಾಮ್ ನೆಟ್ವರ್ಕ್ ಸುಮಾರು ಒಂದು ಲಕ್ಷ ಮಹಿಳೆಯರ ನಕಲಿ ನಗ್ನಚಿತ್ರ ಒಳಗೊಂಡಿರಬಹುದು ಎಂದು ಅಂದಾಜಿಸಿದೆ.
ಇಂತಹ ಚಿತ್ರಗಳು ಈಗಾಗಲೇ ಸಾಕಷ್ಟು ಶೇರ್ ಆಗಿವೆ. ಸಾಮಾಜಿಕ ಮಾಧ್ಯಮದ ವೇದಿಕೆಗಳಿಂದ ಇಲ್ಲವೇ ಖಾಸಗಿ ಮೂಲಗಳಿಂದ ಶೇಕಡ 70ರಷ್ಟು ಮಹಿಳೆಯರ ಫೋಟೋಗಳನ್ನು ಬಳಸಿಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮ ಖಾತೆಯನ್ನು ಹೊಂದಿ ಫೋಟೋಗಳನ್ನು ಪೋಸ್ಟ್ ಮಾಡಿದಾಗ ಈ ರೀತಿಯೂ ಗುರಿಯಾಗಲು ಸಾಧ್ಯವಿದೆ ಎಂದು ‘ಸೆನ್ಸಿಟಿ’ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಮುಖ್ಯ ವಿಜ್ಞಾನಿ ಜಾರ್ಜಿಯೋ ಪತ್ರಿನಿ ಬಿಬಿಸಿಗೆ ತಿಳಿಸಿದ್ದಾರೆ. ಸೆನ್ಸಿಟಿ ಟೆಲಿಗ್ರಾಂ ಬೋಟ್ ಮತ್ತು ನೆಟ್ವರ್ಕ್ ಬಗ್ಗೆ ತನಿಖೆ ನಡೆಸುತ್ತಿದ್ದು ಸೂಕ್ತ ಕ್ರಮಕೈಗೊಳ್ಳಲು ಸಂಬಂಧಿಸಿದ ಸಾಮಾಜಿಕ ಮಾಧ್ಯಮ ವೆಬ್ ಸೈಟ್ ಮತ್ತು ಕಾನೂನು ಅಧಿಕಾರಿಗಳಿಗೆವರದಿ ಕಳಿಸಿದೆ.
ಅರ್ಜೆಂಟೀನಾ ಇಟಲಿ, ರಷ್ಯಾ ಅಮೆರಿಕ ಸೇರಿದಂತೆ ವಿಶ್ವದಾದ್ಯಂತ ಮಹಿಳೆಯರು, ಅಪ್ರಾಪ್ತರ ನಕಲಿ ಚಿತ್ರಗಳನ್ನು ಹಂಚಿಕೊಳ್ಳಲು ಬಳಸಲಾಗಿದೆ ಎಂದು ಹೇಳಲಾಗಿದೆ.