
ಅಂತರ್ಜಾಲದ ಬಳಕೆ ಸರಳ ಹಾಗೂ ಸುಲಭವಾದಷ್ಟೂ ಜನರಿಗೆ ಸುಳ್ಳು ಸುದ್ದಿಗಳು ಹಬ್ಬುವುದು ಹೆಚ್ಚುತ್ತಲೇ ಸಾಗಿದೆ. ಪ್ರತಿನಿತ್ಯ ವಾಟ್ಸಾಪ್ ಫಾರ್ವರ್ಡ್‌ಗಳಿಂದ ಹಿಡಿದು ಯೂಟ್ಯೂಬ್ ವಿಡಿಯೋಗಳವರೆಗೂ ಸಾಕಷ್ಟು ಕಟ್ಟು ಕಥೆಗಳನ್ನು ನೋಡುತ್ತಲೇ ಬಂದಿದ್ದೇವೆ.
ಭಾರತದ ಪ್ರಖ್ಯಾತ ಸಾಧುವೊಬ್ಬರು ಮೂರು ಕಣ್ಣಿನ ಮಗು ಜನಿಸಲಿದೆ ಎಂದು ಹೇಳಿದ್ದರು ಎಂದು ಆನ್ಲೈನ್‌ನಲ್ಲಿ ಪಸರಿಸಲಾಗಿತ್ತು. ಇದಕ್ಕೆ ಪೂರಕವಾದ ವಿಡಿಯೋವೊಂದನ್ನು ಮಾಡಿಕೊಂಡು, ಮಗುವೊಂದು ಮೂರು ಕಣ್ಣುಗಳೊಂದಿಗೆ ಜನಿಸಿದೆ ಎಂದು ಎಲ್ಲಡೆ ವೈರಲ್ ಮಾಡಲಾಗುತ್ತಿದೆ.
ಮೇಲು ನೋಟಕ್ಕೆ ಮಗುವಿನ ಹಣೆಯ ಮೇಲಿರುವ ಮೂರನೇ ಕಣ್ಣು ಅದರ ಎಡಗಣ್ಣಿನ ತದ್ರೂಪದಂತೆ ಕಾಣುತ್ತಿದೆ. ಈ ಮಗು ಜರ್ಮನಿಯಲ್ಲಿ ಹುಟ್ಟಿತೆಂದು ವಿಡಿಯೋದಲ್ಲಿ ಹೇಳಿಕೊಳ್ಳಲಾಗಿದೆ. ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಇದರ ಅಸಲಿಯತ್ತು ಬಹಳ ಸುಲಭದಲ್ಲಿ ತಿಳಿದುಬಿಡುತ್ತಿದೆ.
