ತಮ್ಮ ಸೇವೆ ಕುರಿತಂತೆ ಕ್ರಿಟಿಕಲ್ ಆಗಿ ರಿವ್ಯೂ ಬರೆದರು ಎಂಬ ಕಾರಣಕ್ಕೆ ಗ್ರಾಹಕರಿಗೆ ಕಿರುಕುಳ ನೀಡುತ್ತಿದ್ದ ಇಬೇ ಕಂಪನಿಯ ಆರು ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆನ್ಲೈನ್ ಸುದ್ದಿ ಪತ್ರಿಕೆಯೊಂದರ ಸಂಪಾದಕ ಹಾಗೂ ಪಬ್ಲಿಷರ್ ದಂಪತಿ ಮನೆಗೆ ಡೆಲಿವರಿ ನೀಡುವ ವೇಳೆ ಜೀವಂತ ಜೇಡಗಳು ಹಾಗೂ ಜಿರಲೆಗಳನ್ನು ಪ್ಯಾಕೇಜ್ ನಲ್ಲಿ ಕಳುಹಿಸಲಾಗುತ್ತಿತ್ತು. ತಮ್ಮ ಕಂಪನಿ ಬಗ್ಗೆ ನೆಗೆಟಿವ್ ರಿವ್ಯೂ ಬರೆದ ಈ ಇಬ್ಬರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ ಇಬೇ ಎಕ್ಸಿಕ್ಯೂಟಿವ್‌ಗಳು ಹಾಗೂ ಉದ್ಯೋಗಿಗಳು ದಂಪತಿ ಮನೆಗೆ ವಿಚಿತ್ರ ಮಾಸ್ಕ್‌ಗಳು, ಶವಸಂಸ್ಕಾರದ ವಸ್ತುಗಳು, ಅಶ್ಲೀಲ ಸಾಹಿತ್ಯಗಳು ಸೇರಿದಂತೆ ಚಿತ್ರವಿಚಿತ್ರ ವಸ್ತುಗಳನ್ನು ಕಳುಹಿಸಲು ಆರಂಭಿಸಿದ್ದರು. ಇದರೊಂದಿಗೆ ದಂಪತಿಗಳ ಕಾರಿನಲ್ಲಿ ಜಿಪಿಎಸ್ ಸಾಧನವನ್ನೂ ಸಹ ಅಳವಡಿಸಿದ್ದರು ಎನ್ನಲಾಗಿದೆ.
ಇದೀಗ ಕಂಪನಿಯ ಹಿರಿಯ ನಿದೇರ್ಶಕನನ್ನೂ ಸೇರಿದಂತೆ ಅನೇಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕೋರ್ಟಿನ ಮೆಟ್ಟಿಲೇರಲಾಗಿದೆ. ತನ್ನ ಸಿಬ್ಬಂದಿಯಿಂದ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವ ವಿಚಾರವಾಗಿ ಪೊಲೀಸ್ ಇಲಾಖೆಯಿಂದ ನೋಟಿಫಿಕೇಶನ್ ಸಿಕ್ಕ ಕೂಡಲೇ ಆಂತರಿಕ ತನಿಖೆಗೆ ಮುಂದಾಗಿದ್ದ ಇಬೇ, ತನ್ನ ಮಂಡಳಿ ನಿರ್ದೇಶಕರ ನೇತೃತ್ವದಲ್ಲಿ ತನಿಖೆಯೊಂದನ್ನು ಕೈಗೆತ್ತಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿಕೊಂಡಿದೆ.