ಅಳಿವಿನ ಅಂಚಿನಲ್ಲಿರುವ ಭಾರತ ಮೂಲದ ಘೇಂಡಾಮೃಗವೊಂದು ಪೋಲೆಂಡ್‌ನ ರೋಕ್ಲಾ ಮೃಗಾಲಯದಲ್ಲಿ ಮರಿಯೊಂದಕ್ಕೆ ಜನ್ಮವಿತ್ತಿದ್ದು, ಈ ಅಪರೂಪದ ಪ್ರಾಣಿಯ ಸಂರಕ್ಷಣೆ ಸಂಬಂಧ ಹೊಸ ಭರವಸೆ ಮೂಡಿದೆ.
ಜನವರಿ 6ರಂದು ಜನಿಸಿದ ಈ ಹೆಣ್ಣು ಮರಿಯು ಮೃಗಾಲಯದ 155 ವರ್ಷಗಳ ಇತಿಹಾಸದಲ್ಲಿ ಜನಿಸಿದ ಮೊದಲ ಭಾರತೀಯ ಘೇಂಡಾಮೃಗವಾಗಿದೆ ಎಂದು ಮೃಗಾಲಯದ ಪದಾಧಿಕಾರಿಗಳು ತಿಳಿಸಿದ್ದಾರೆ. ಏಳು ವರ್ಷದ ಹೆಣ್ಣು ಘೇಂಡಾಮೃಗ ಮರುಷ್ಕಾ ಹಾಗೂ 11 ವರ್ಷದ ಗಂಡು ಮನಸ್‌ಗೆ ಈ ಘೇಂಡಾಮೃಗ ಜನಿಸಿದೆ.
“ಮೊದಲ ಬಾರಿಗೆ ತಾಯಿಯಾಗಿರುವ ಮರುಷ್ಕಾ ಬಹಳ ಉಲ್ಲಾಸದಿಂದ ಇದ್ದಾಳೆ. ಅವಳು ತನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ಆಕೆಯನ್ನು ಶುಶ್ರೂಷೆ ಮಾಡಲು ಅನುವು ಮಾಡಿಕೊಡುತ್ತಿದ್ದಾಳೆ. ಘೇಂಡಾಮೃಗದ ಮರಿಯು ಬಹಳ ನಾಜೂಕಾಗಿದ್ದು, ಎರಡು ಟನ್ ತೂಕವಿರುವ ತನ್ನ ಭಾರವೆಲ್ಲಿ ಮಗಳ ಮೇಲೆ ಬೀಳುತ್ತದೋ ಎಂಬ ಭೀತಿಯಲ್ಲಿ ಕೂರುವಾಗಲೂ ಬಹಳ ಸೂಕ್ಷ್ಮವಾಗಿ ಕೂರುತ್ತಾಳೆ ಮರುಷ್ಕಾ,” ಎಂದು ಮೃಗಾಲಯದ ಅಧ್ಯಕ್ಷ ರಾಡೋಸ್ಲಾ ರಟಾಜ್ಕಾಕ್ ಹೇಳಿದ್ದಾರೆ.
ಅಳಿವಿನ ಅಂಚಿಗೆ ತಲುಪಿದ್ದ ಭಾರತೀಯ ಘೇಂಡಾಮೃಗದ ರಕ್ಷಣೆಗೆಂದು ಭಾರತೀಯ ಸರ್ಕಾರವು 1970ರಲ್ಲಿ ಯೋಜನೆಯೊಂದನ್ನು ಜಾರಿಗೆ ತಂದ ಕಾರಣ ಈಗ ದೇಶದಲ್ಲಿ 3600+ ಘೇಂಡಾಮೃಗಗಳು ಇದ್ದು, ಇವುಗಳ ಪೈಕಿ ಜಗತ್ತಿನಾದ್ಯಂತ ಇರುವ 66 ಮೃಗಾಲಯಗಳಲ್ಲಿ 170ಕ್ಕೂ ಹೆಚ್ಚು ಘೇಂಡಾಮೃಗಗಳು ಇವೆ.