ನೈರುತ್ಯ ಐಸ್ಲ್ಯಾಂಡ್ ನಲ್ಲಿ 5.7 ತೀವ್ರತೆಯ ಭೂಕಂಪ ಅ.20 ರಂದು ಸಂಭವಿಸಿದೆ. ವಾಷಿಂಗ್ಟನ್ ಪೋಸ್ಟ್ ಅಲ್ಲಿನ ಪ್ರಧಾನಿ ಕಾತ್ರಿನ್ಸ್ ಜಾಕೊಬ್ಸ್ ಡಾಟರ್ ಅವರ ಲೈವ್ ಸಂದರ್ಶನ ನಡೆಸುತ್ತಿದ್ದ ವೇಳೆ ಭೂಕಂಪ ಸಂಭವಿಸಿದ್ದು, ಅವರು ನೀಡಿದ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೊರೊನಾ ವೈರಸ್ ನಿಂದ ಐಸ್ಲ್ಯಾಂಡ್ ದೇಶದ ಪ್ರವಾಸೋದ್ಯಮದ ಮೇಲೆ ಬೀರಿದ ಪರಿಣಾಮದ ಬಗ್ಗೆ ವಾಷಿಂಗ್ಟನ್ ಪೋಸ್ಟ್ ನ ವಿದೇಶಾಂಗ ವ್ಯವಹಾರಗಳ ಅಂಕಣಕಾರ ಡೇವಿಡ್ ಇಗ್ನಾಟ್ಯೂಸ್ ಅವರು, ಪ್ರಧಾನಿ ಕಾತ್ರಿನ್ ಅವರನ್ನು ಸಂದರ್ಶನ ನಡೆಸಿದ್ದರು. ಆಗ ಭೂಕಂಪ ಸಂಭವಿಸಿದ್ದು, ಪ್ರಧಾನಿ ಕಾತ್ರಿನ್ “ಓ ಮೈ ಗಾಡ್ ಭೂಕಂಪ!!” ಎಂದು ಪ್ರತಿಕ್ರಿಯಿಸಿದ್ದಾರೆ.
ವಾಷಿಂಗ್ಟನ್ ಪೋಸ್ಟ್ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ. ಅಂಥ ಭಯಾನಕ ಸನ್ನಿವೇಶದಲ್ಲೂ ಪ್ರಧಾನಿ ಕಾತ್ರಿನ್ ಗಲಿಬಿಲಿಗೊಳ್ಳದೇ ತದೇಕಚಿತ್ತದಿಂದ ಇರುವ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.