ಭಾರತ ಮೂಲದ ವ್ಯಕ್ತಿಯೊಬ್ಬರು ಮಲಗಿದ್ದ ವೇಳೆ ಸರ್ಜಿಕಲ್ ಮಾಸ್ಕ್ ಧರಿಸಿದ್ದ ಡಕಾಯಿತರು ಅವರ ಮೇಲೆ ದಾಳಿ ಮಾಡಿದ ಘಟನೆ ದುಬೈನಲ್ಲಿ ನಡೆದಿದೆ.
ಈ ಬಗ್ಗೆ ಮಾತನಾಡಿದ 33 ವರ್ಷದ ಭಾರತೀಯ, ತಾನು ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಬಳಿಕ ತನ್ನ ಮೇಲೆ ದಾಳಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
“ಅವರೆಲ್ಲಾ ಸರ್ಜಿಕಲ್ ಮಾಸ್ಕ್ ಧರಿಸಿದ್ದರು. ಅವರಲ್ಲಿ ಒಬ್ಬ ನನ್ನನ್ನು ಹಿಡಿದುಕೊಂಡರೆ ಮತ್ತೊಬ್ಬ ಲೋಹದ ಬಾರ್‌ನಿಂದ ದಾಳಿ ಮಾಡಿದ. ಪ್ರತಿರೋಧ ಒಡ್ಡಲು ಮಾಡಿದ ನನ್ನ ಯತ್ನಗಳೆಲ್ಲವೂ ವಿಫಲವಾದವು. ದಾಳಿಕೋರರಲ್ಲಿ ಒಬ್ಬನ ಮಾಸ್ಕ್ ಅನ್ನು ಎಳೆದೆ, ಆಗ ಆತನ ಮುಖ ಕಾಣಿಸಿತು” ಎಂದಿದ್ದಾರೆ.
ಸಂತ್ರಸ್ತನ ಮುಖದ ಮೇಲೆ ಪ್ಲಾಸ್ಟಿಕ್ ಬ್ಯಾಗ್ ಹಾಕಿದ ದಾಳಿಕೋರರು, ಆತನ ಬಾಯಿಗೆ ಟೇಪ್ ಹಾಕಿದ್ದಾರೆ. ಲ್ಯಾಪ್ಟಾಪ್, ಮೊಬೈಲ್, ನಗದು ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ಕಳ್ಳರು ದೋಚಿದ್ದಾರೆ. ಒಬ್ಬ ಡಕಾಯಿತನನ್ನು ಬಂಧಿಸಲಾಗಿದ್ದು, ಇನ್ನಿಬ್ಬರ ಶೋಧಕ್ಕೆ ಜಾಲ ಬೀಸಲಾಗಿದೆ.