ಬದುಕು ಎಲ್ಲರಿಗೂ ಮತ್ತೊಂದು ಚಾನ್ಸ್ ಅಂತ ಕೊಡುತ್ತದೆ. ದೃಢ ನಿಶ್ಚಯ ಮಾಡುವ ಕೆಲವೇ ಮಂದಿ ತಮಗೆ ಸಿಕ್ಕ ಈ ಎರಡನೇ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಯಶಸ್ಸಿನ ಪಥವನ್ನೇರುತ್ತಾರೆ.
ತನ್ನ 16ನೇ ವಯಸ್ಸಿಗೇ ಜೈಲು ಸೇರಿದ್ದ ಮಾಜಿ ಡ್ರಗ್ ಡೀಲರ್ ಒಬ್ಬ ತನ್ನ ಬದುಕಿಗೊಂದು ತಿರುವು ಕೊಟ್ಟುಕೊಂಡು ಬ್ರಿಟನ್‌ನ ವಿವಿಯೊಂದರಲ್ಲಿ ಕ್ರಿಮಿನಾಲಜಿ ಪ್ರೊಫೆಸರ್ ಆಗಿದ್ದಾರೆ.
ತನ್ನ ಹದಿಹರೆಯದ ದಿನಗಳಲ್ಲಿ ಕೆಟ್ಟ ಸಹವಾಸಕ್ಕೆ ಬಿದ್ದ ಸ್ಟೀಫನ್ ಅಪ್ಕಾಬಿಯೋ-ಕ್ಲೆಮೆಂಟೋವಿಸ್ಕೀ ಡ್ರಗ್ಸ್ ಡೀಲಿಂಗ್ ಮಾಡುತ್ತಾ ಪೊಲೀಸರ ಕೈಗೆ ಸಿಕ್ಕಿಬಿದ್ದು, 16 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ತಮ್ಮ ಜೈಲು ಶಿಕ್ಷೆಯ ಆರಂಭದ ಅವಧಿಯಲ್ಲಿ ಅಲ್ಲಿನ ಅಡುಗೆ ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಸ್ಟೀಫನ್, ಕೆಲ ತಿಂಗಳುಗಳ ಬಳಿಕ ಮುಕ್ತ ವಿವಿಯೊಂದರಲ್ಲಿ ಕೋರ್ಸ್ ಒಂದಕ್ಕೆ ನೋಂದಣಿಯಾದರು.
ಜೈಲಿನ ಸೆಲ್ ನಲ್ಲಿದ್ದುಕೊಂಡೇ ಗಮನವಿಟ್ಟು ಅಧ್ಯಯನ ಮಾಡಿದ ಸ್ಟೀಫನ್, ತಮ್ಮ ಒಳ್ಳೆಯ ವರ್ತನೆ ಹಾಗೂ ಶೈಕ್ಷಣಿಕ ಸಾಮಥ್ಯಗಳ ಬಲದಿಂದ ಎಂಟೇ ವರ್ಷಗಳಲ್ಲಿ ಜೈಲು ಶಿಕ್ಷೆಯಿಂದ ಮುಕ್ತಿ ಪಡೆದ ಹೊರಬಂದಿದ್ದಾರೆ. ಈ ಅವಧಿಯಲ್ಲಿ ಅವರು ಮೂರು ಡಿಗ್ರಿಗಳನ್ನು ಮುಗಿಸಿದ್ದಾರೆ. ಇವುಗಳ ಪೈಕಿ ಎರಡು ಮಾಸ್ಟರ್ ಮಟ್ಟದ್ದವಾಗಿವೆ. ಇದಾದ ಬಳಿಕ ಮುಕ್ತ ವಿವಿಯೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಸ್ಟೀಫನ್, ಕುಟುಂಬ ಕಟ್ಟಿಕೊಂಡಿದ್ದು, ಒಳ್ಳೆಯ ಜೀವನ ನಡೆಸುತ್ತಿದ್ದಾರೆ.