ಬ್ರಿಟನ್‌ನ ತದ್ರೂಪು ಅವಳಿ-ಜವಳಿಗಳ ಪೈಕಿ ಅತ್ಯಂತ ಹಿರಿಯ ಜೋಡಿಯಾದ ಡೋರಿಸ್ & ಲಿಲಿಯನ್ ಹಾಬ್ಡೇರ 96 ವರ್ಷಗಳ ಸುದೀರ್ಘ ಜಂಟಿ ಪಯಣಕ್ಕೆ ತೆರೆ ಬಿದ್ದಿದೆ. ಅವಳಿ-ಜವಳಿಯ ಒಂದರ್ಧವಾದ ಡೋರಿಸ್ ಕೋವಿಡ್ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.
ಟಿಪ್ಟಾನ್ ಟ್ವಿನ್ಸ್ ಎಂದು ಜನಪ್ರಿಯವಾಗಿದ್ದ ಈ ಸಹೋದರಿಯರು ಜನವರಿ ಆರಂಭದಲ್ಲಿ ಕೋವಿಡ್-19 ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 5ರಂದು ಡೋರಿಸ್ ಕೊನೆಯುಸಿರೆಳೆದಿದ್ದಾರೆ.
“ನಮ್ಮೆಲ್ಲಾ ಸವಿನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅವಕಾಶ ಸಿಕ್ಕಿರುವುದಕ್ಕೆ ನಾವು ಬಹಳ ಧನ್ಯರಾಗಿದ್ದೇವೆ. 65 ವರ್ಷಗಳ ಸಂತಸಮಯ ದಾಂಪತ್ಯ ಜೀವನಕ್ಕೆ ತೆರೆ ಎಳೆದು 11 ವರ್ಷಗಳ ಹಿಂದೆ ನಿಧನರಾದ ತಮ್ಮ ಪತಿಯ ಸಮಾಧಿ ಬಳಿಯೇ ಡೋರಿಸ್ ಅಂತಿಮವಾಗಿ ನಿದ್ರಿಸಲಿದ್ದಾರೆ” ಎಂದು ಡೋರಿಸ್ ಕುಟುಂಬ ತಿಳಿಸಿದೆ.
ಸಹೋದರಿಯ ಅಗಲಿಕೆಯ ನೋವಿನಲ್ಲಿರುವ ಲಿಲಿಯನ್‌ರನ್ನು ಅವರ ಮಗಳು ವಿವಿಯೆನ್ ಹಾಗೂ ಕುಟುಂಬ ಸಂತೈಸುತ್ತಿದೆ. ವೆಸ್ಟ್ ಮಿಡ್‌ಲ್ಯಾಂಡ್ಸ್‌ನ ಟಿಪ್ಟನ್‌ನವರಾದ ಡೋರಿಸ್ ಹಾಗೂ ಲಿಲಿಯನ್, ತಮ್ಮ ಹಾಸ್ಯಪ್ರಜ್ಞೆ ಹಾಗೂ ಜೀವನದ ಬಗೆಗಿನ ಸಕಾರಾತ್ಮಕ ನಿಲುವಿನ ಪೋಸ್ಟ್‌ಗಳಿಂದ ಆನ್ಲೈನ್‌ನಲ್ಲಿ ಭಾರೀ ಜನಪ್ರಿಯರಾಗಿದ್ದರು. ಕಳೆದ ವರ್ಷ ’ಗುಡ್ ಮಾರ್ನಿಂಗ್ ಬ್ರಿಟನ್’ ದೈನಿಕಕ್ಕೆ ಸಂದರ್ಶನ ಕೊಟ್ಟಿದ್ದ ಈ ಸಹೋದರಿಯರ ಮಾತುಗಳು ಭಾರೀ ವೈರಲ್ ಆಗಿದ್ದವು.