ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವವನ್ನು ವ್ಯಾಪಿಸಿದ್ದು, ಈಗಾಗಲೇ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರ ಲಸಿಕೆ ಇನ್ನೂ ಸಿದ್ಧವಾಗಿಲ್ಲವಾದ ಕಾರಣ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದೆ.
ವಿಶ್ವದ ಎಲ್ಲ ರಾಷ್ಟ್ರಗಳು ಕೊರೊನಾ ಲಸಿಕೆ ಸಿದ್ದಪಡಿಸಲು ನಿರತವಾಗಿರುವ ಮಧ್ಯೆ ರಷ್ಯಾ, ಇನ್ನು ಕೆಲ ದಿನಗಳಲ್ಲೇ ಲಸಿಕೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಆದರೆ ಈ ಲಸಿಕೆ ಕುರಿತು ವಿಶ್ವಸಂಸ್ಥೆ ಅನುಮಾನ ವ್ಯಕ್ತಪಡಿಸಿರುವುದರ ಮಧ್ಯೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲಸಿಕೆ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
ಅಮೆರಿಕಾ ಕೊರೊನಾದಿಂದ ಹೆಚ್ಚು ಬಾಧೆಗೊಳಗಾದ ರಾಷ್ಟ್ರವಾಗಿದ್ದು, ಇಲ್ಲಿ ಪ್ರತಿನಿತ್ಯ ಕನಿಷ್ಠ ಒಂದು ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ. ಇದರ ಮಧ್ಯೆಯೂ ಸುದೀರ್ಘ ಕಾಲದಿಂದ ಮುಚ್ಚಲ್ಪಟ್ಟಿದ್ದ ಶಾಲಾ-ಕಾಲೇಜುಗಳು ಪ್ರಾರಂಭವಾಗುತ್ತಿವೆ. ಇದೀಗ ಡೊನಾಲ್ಡ್ ಟ್ರಂಪ್ ನವೆಂಬರ್ 3ರೊಳಗೆ ಅಮೆರಿಕಾ ಲಸಿಕೆ ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿದ್ದು, ಹೀಗಾಗಿ ಎಲ್ಲೆಡೆ ಆಶಾಭಾವನೆ ಮೂಡಿದೆ.