ವಾಷಿಂಗ್ಟನ್: ಅಮೆರಿಕಾ ಸಂಯುಕ್ತ ಸಂಸ್ಥಾನದ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪಗಳು ಜೋರಾಗಿವೆ.
ಡೆಮೊಕ್ರೆಟಿಕ್ ಪಕ್ಷದ ಜೊಯ್ ಬಿಡೆನ್ ಅವರನ್ನು ಬೆಂಬಲಿಸಿದ ನಿವೃತ್ತ ಸರ್ಕಾರಿ ನೌಕರ ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳಿದ್ದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮುಖಭಂಗವಾಗಿದೆ. ನೌಕರ ಸರಿಯಾಗಿ ತಿರುಗೇಟು ನೀಡಿದ್ದಾನೆ.
ಹೋಮ್ ಲ್ಯಾಂಡ್ ಭದ್ರತಾ ವಿಭಾಗದ ನಿವೃತ್ತ ನೌಕರ ಮಿಲ್ಸ್ ಟೇಲರ್ ಯಾರೆಂದು ನನಗೆ ಗೊತ್ತಿಲ್ಲ. ಆತನನ್ನು ನಾನೆಂದೂ ಭೇಟಿಯಾಗಿಲ್ಲ. ನನ್ನ ಸರ್ಕಾರದಲ್ಲಿ ಸಾವಿರಾರು ಜನ ಕಾರ್ಯನಿರ್ವಹಿಸುತ್ತಾರೆ. ಅವರನ್ನೆಲ್ಲ ಹೇಗೆ ನೆನಪಿಟ್ಟುಕೊಳ್ಳಲು ಸಾಧ್ಯ ಎಂದು ಟ್ರಂಪ್ ಟ್ವೀಟ್ ಮಾಡಿದ್ದರು.
ಟೇಲರ್ ತಾವು ಟ್ರಂಪ್ ಜತೆ ಇರುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದು, “ಅಯ್ಯೋ, ನಾನಂತೂ ನಿಮ್ಮನ್ನು ಮರೆತಿಲ್ಲ. ಚುನಾವಣೆ ಮುಗಿಯುವವರೆಗೆ ಕೆಲವು ಕಥೆಗಳನ್ನು ಹೇಳಿ ನಿಮಗೆ ನನ್ನ ನೆನಪು ಮಾಡಿಕೊಡಬೇಕಾಯಿತು” ಎಂದು ಪ್ರತಿಕ್ರಿಯಿಸಿದ್ದಾರೆ.
ವೈಟ್ ಹೌಸ್ ಟ್ರಂಪ್ ಹೇಳಿಕೆ ಬೆಂಬಲಿಸಿ ಟೇಲರ್ ಫೋಟೋಕ್ಕೆ ಪ್ರತಿಕ್ರಿಯಿಸಿದ್ದು, “ಟ್ರಂಪ್ ದಿನವೂ ಸಾವಿರಾರು ಜನರ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರನ್ನೆಲ್ಲ ಪರಿಚಯಸ್ಥರು ಎನ್ನಲು ಸಾಧ್ಯವಿಲ್ಲ” ಎಂದು ಟ್ವೀಟ್ ಮಾಡಿದೆ.