
ನಿಷ್ಠಾವಂತ ಪ್ರಾಣಿ ಅಂದ್ರೆ ನಾಯಿ. ಮನುಷ್ಯ ಸ್ವಲ್ಪ ಪ್ರೀತಿ ತೋರಿಸಿದ್ರೆ ಅಪಾರ ಪ್ರೀತಿ, ವಿಶ್ವಾಸ ತೋರಿಸುವ ಪ್ರಾಣಿಗಳಲ್ಲಿ ನಾಯಿ ಮೊದಲ ಸ್ಥಾನದಲ್ಲಿದೆ. ಮಾಲಿಕನನ್ನು ಅತಿಯಾಗಿ ಪ್ರೀತಿಸುವ ನಾಯಿ, ಆತನಿಗೆ ಏನಾದ್ರೂ ಸಹಿಸುವುದಿಲ್ಲ. ಇದಕ್ಕೆ ಟರ್ಕಿಯ ನಾಯಿಯೊಂದು ಉತ್ತಮ ನಿದರ್ಶನ.
ಟರ್ಕಿಯ ನಾಯಿ ಕಥೆ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತದೆ. ನಾಯಿ ಮಾಲಿಕ ಆಸ್ಪತ್ರೆಗೆ ದಾಖಲಾಗಿದ್ದ. ಆರು ದಿನಗಳಿಂದ ಆಸ್ಪತ್ರೆ ಒಳಗೆ ಮಾಲಿಕ ಚಿಕಿತ್ಸೆ ಪಡೆಯುತ್ತಿದ್ದರೆ, ಆಸ್ಪತ್ರೆ ಹೊರಗೆ ನಾಯಿ ಕಾಯುತ್ತ ಕುಳಿತಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ನಾಯಿ ಫೋಟೋ ವೈರಲ್ ಆಗಿದೆ. ಟರ್ಕಿಯ ಟ್ರಾಬ್ ಜಾನ್ ನಗರದಲ್ಲಿ ಘಟನೆ ನಡೆದಿದೆ. ವೃದ್ಧ ವ್ಯಕ್ತಿಗೆ ಮಿದುಳಿನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆಂಬುಲೆನ್ಸ್ ಹಿಂದೆ ನಾಯಿ ಓಡಿ ಬಂದಿತ್ತು. ಇದನ್ನು ನೋಡಿದ ಆಸ್ಪತ್ರೆ ಸಿಬ್ಬಂದಿ ಆಶ್ಚರ್ಯಗೊಂಡಿದ್ದರು. ಆಸ್ಪತ್ರೆ ಮುಂದೆ ಮಾಲಿಕನಿಗಾಗಿ ಕಾಯುತ್ತ ಕುಳಿತಿದ್ದ ನಾಯಿಗೆ ಆಸ್ಪತ್ರೆ ಸಿಬ್ಬಂದಿ ಆಹಾರ ಹಾಕಲು ಶುರು ಮಾಡಿದ್ದರು.
ವೃದ್ಧನ ಮಗಳು ಅನೇಕ ಬಾರಿ ನಾಯಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗುವ ಪ್ರಯತ್ನ ನಡೆಸಿದ್ದಾಳೆ. ಆದ್ರೆ ನಾಯಿ ಹೋಗಲಿಲ್ಲ. ವೃದ್ಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗುವಾಗ ನಾಯಿ ಕೂಡ ಆತನ ಜೊತೆ ಮನೆಗೆ ಹೋಗಿದೆ.