ನೀವೇನಾದರೂ ಮೀನು ಪ್ರಿಯರಾಗಿದ್ರೆ ಅದನ್ನ ತಿನ್ನೋದು ಹೇಗೆ ಅನ್ನೋದು ನಿಮಗೆ ಚೆನ್ನಾಗಿಯೇ ಗೊತ್ತಿರುತ್ತೆ. ಸಣ್ಣ ಸಣ್ಣ ಹೋಳುಗಳನ್ನ ನೀವು ಬಾಯಿಗೆ ಹಾಕಿಕೊಳ್ತೀರಿ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ಕೊಲಂಬಿಯಾದ ವೈದ್ಯನೊಬ್ಬ ರೋಗಿಯ ಬಾಯಿಯಿಂದ ಬರೋಬ್ಬರಿ 7 ಇಂಚು ಉದ್ದದ ಮೀನನ್ನ ಹೊರ ತೆಗೆದಿದ್ದಾರೆ.
24 ವರ್ಷದ ವ್ಯಕ್ತಿ ಜನವರಿ 23ರಂದು ಮೀನು ಹಿಡಿಯಲು ತೆರಳಿದ್ದ ಈ ವೇಳೆ ಈ ಘಟನೆ ಸಂಭವಿಸಿದೆ. ಗಾಳಕ್ಕೆ ಮೀನು ಬಿದ್ದ ಬಳಿಕ ಅದನ್ನ ಕೈಯಲ್ಲಿ ಹಿಡಿದು ಮತ್ತೊಮ್ಮೆ ಮೀನನ್ನ ಹಿಡಿಯಲು ಗಾಳವನ್ನ ನೀರಿಗೆ ಬಿಟ್ಟಿದ್ದ. ಈ ವೇಳೆ ಎರಡನೇ ಮೀನು ಈತನ ಗಾಳಕ್ಕೆ ಬಿದ್ದಿದೆ.
ಈತನ ಒಂದು ಕೈಯಲ್ಲಿ ಈ ಹಿಂದೆ ಹಿಡಿದ ಮೀನು ಇತ್ತು. ಇನ್ನೊಂದು ಕೈಯಲ್ಲಿ ಎರಡನೇ ಮೀನನ್ನ ಹಿಡಿದ ಗಾಳವಿತ್ತು. ಹೊಸ ಬೇಟೆಯನ್ನ ಕಳೆದುಕೊಳ್ಳೋಕೆ ಈತನಿಗೆ ಇಷ್ಟವಿರಲಿಲ್ಲ. ಹೀಗಾಗಿ ಈತ ಮೊದಲನೇ ಮೀನನ್ನ ಬಾಯಲ್ಲಿ ಕಚ್ಚಿಕೊಂಡು ಎರಡನೇ ಮೀನನ್ನ ದಡಕ್ಕೆ ತಲುಪಿಸೋ ಬಗ್ಗೆ ಪ್ಲಾನ್ ಮಾಡಿದ್ದ.
ಆದರೆ ದುರಾದೃಷ್ಟವಶಾತ್ ಮೊದಲನೇ ಮೀನು ಈತನ ಪ್ಲಾನ್ನಂತೆ ವರ್ತಿಸಲಿಲ್ಲ. ಅವನು ಯಾವಾಗ ಆ ಮೀನನ್ನ ಬಾಯಿಗೆ ಹಾಕಿಕೊಂಡನೋ. ಅದು ಮುಂದಕ್ಕೆ ಹೋಗಿ ಈತನ ಗಂಟಲಿನಲ್ಲಿ ಸಿಲುಕಿದೆ.
ಈತ ಕೂಡಲೇ ಆಸ್ಪತ್ರೆಗೆ ತೆರಳಿದ್ದ. ಆದರೆ ಗಂಟಲಿನಲ್ಲಿ ಮೀನು ಸಿಕ್ಕಿ ಹಾಕಿಕೊಂಡಿದ್ದರಿಂದ ಮಾತನಾಡಲೂ ಸಾಧ್ಯವಾಗ್ತಿರಲಿಲ್ಲ. ಕೂಡಲೇ ವೈದ್ಯರು ಆತನ ಗಂಟಲನ್ನ ಸ್ಕ್ಯಾನ್ ಮಾಡಿದ್ದಾರೆ. ಹಾಗೂ ಗಂಟಲಿನಲ್ಲಿದ್ದ ಮೀನನ್ನ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ವ್ಯಕ್ತಿಯನ್ನ 2 ದಿನಗಳ ಆಸ್ಪತ್ರೆಯಲ್ಲಿ ನಿಗಾದಲ್ಲಿ ಇಡಲಾಗಿತ್ತು. ಅದೃಷ್ಟವಶಾತ್ ಆತನ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ.